ಬೆಂಗಳೂರು : ಏರೋ ಇಂಡಿಯಾ 2025ರ 4ನೇ ದಿನ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಹೆಚ್ಎಎಲ್ ನಿರ್ಮಿತ ಬೇಸಿಕ್ ಟ್ರೈನರ್ ಏರ್‌ಕ್ರಾಫ್ಟ್ ಹಿಂದೂಸ್ತಾನ್ ಟರ್ಬೊ ಟ್ರೈನರ್-40 (HTT-40) ನಲ್ಲಿ ಸುಮಾರು 30 ನಿಮಿಷಗಳ ಕಾಲ ಹಾರಾಟ ನಡೆಸಿದರು.
ಬಳಿಕ ಮಾತನಾಡಿದ ಸಂಸದರು, "ಹೆಚ್ಎಎಲ್ ನಿರ್ಮಿತ HTT-40 ವಿಮಾನದಲ್ಲಿ ಹಾರಾಟ ನಡೆಸಲು ಅವಕಾಶ ಸಿಕ್ಕಿದೆ. ಹೆಚ್ಎಎಲ್ ನಮ್ಮ ಭಾರತ ಹಾಗೂ ಕರ್ನಾಟಕದ ಹೆಮ್ಮೆ" ಎಂದರು.
''ಭಾರತದ ಸ್ವಾವಲಂಬನೆಗೆ, ವಿದೇಶಗಳ ಮೇಲಿನ ಅವಲಂಬನೆಯಿಂದ ಆತ್ಮನಿರ್ಭರತೆಯನ್ನು HTT-40 ಪ್ರತಿನಿಧಿಸುತ್ತದೆ. 2012ರಲ್ಲಿ, ಯುಪಿಎ ಸರ್ಕಾರದ ಅವಧಿಯಲ್ಲಿ, ಭಾರತ 3,000 ಕೋಟಿ ರೂ.ಗಳ ಒಪ್ಪಂದದ ಮೂಲಕ ಸ್ವಿಸ್‌ನ ಪಿಲಾಟಸ್ ತರಬೇತಿ ವಿಮಾನವನ್ನು ಖರೀದಿಸಿತು. ಖರೀದಿ ಪ್ರಕ್ರಿಯೆಯು ಅಕ್ರಮಗಳಿಂದ ಕೂಡಿತ್ತು ಮತ್ತು 2019ರಲ್ಲಿ ಸಿಬಿಐ ವಿಚಾರಣೆಗೆ ಒಳಪಟ್ಟ ಬಳಿಕ ಆ ಒಪ್ಪಂದದಲ್ಲಿ ಮಧ್ಯವರ್ತಿಗಳ ಪಾತ್ರವಿರುವುದು ಬಹಿರಂಗವಾಯಿತು. ನಂತರ ಪಿಲಾಟಸ್‌ಅನ್ನು ಕಪ್ಪುಪಟ್ಟಿಗೆ ಸೇರಿಸಲಾಯಿತು'' ಎಂದು ತಿಳಿಸಿತು.
''ಅದೇ ಸಂಧರ್ಭದಲ್ಲಿ ಭಾರತಕ್ಕೆ ಸ್ಥಳೀಯ ತರಬೇತಿ ವಿಮಾನದ ತುರ್ತು ಅಗತ್ಯವಿತ್ತು. ಆ ಸವಾಲಿನ ಅವಧಿಯಲ್ಲಿ ಹೆಚ್ಎಎಲ್ ದೇಶೀಯ ತರಬೇತಿ ವಿಮಾನದ ಮೇಲೆ ಕೆಲಸದಲ್ಲಿ ತೊಡಗಿತ್ತು. ಸಾಕಷ್ಟು ಹಿನ್ನಡೆಗಳ ಬಳಿಕ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತು ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರ ಬೆಂಬಲದೊಂದಿಗೆ ಹೆಚ್ಎಎಲ್ ತರಬೇತಿ ವಿಮಾನ ಯೋಜನೆಗೆ ವೇಗ ಸಿಗಲು ಅಗತ್ಯವಾದ ಹಣಕಾಸು ಬೆಂಬಲ ಪಡೆಯಿತು" ಎಂದು ಸಂಸದ ತೇಜಸ್ವಿ ಸೂರ್ಯ ನೆನೆದರು.