ಗಂಗಾವತಿ:ರಾಷ್ಟ್ರದೆಲ್ಲೆಡೆ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹೆಚ್ಚೆಚ್ಚು ಜನರನ್ನು ಪಕ್ಷದ ಪ್ರಾಥಮಿಕ ಸದಸ್ಯರನ್ನಾಗಿಸುವುದು ಇದರ ಉದ್ದೇಶ. ಈ ಹಿನ್ನೆಲೆಯಲ್ಲಿ ಕೊಪ್ಪಳದ ಗಂಗಾವತಿಯಲ್ಲೂ ಪಕ್ಷದ ನಾಯಕರು ಸದಸ್ಯತ್ವ ಅಭಿಯಾನ ನಡೆಸುತ್ತಿದ್ದಾರೆ. ಭಾನುವಾರ ಮದುವೆ ಮಂಟಪದಲ್ಲಿ ವಧು-ವರರ ಸದಸ್ಯತ್ವ ಮಾಡಿಸಿಕೊಂಡಿದ್ದು ಕುತೂಹಲ ಕೆರಳಿಸಿತು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ನೇತೃತ್ವದಲ್ಲಿ ಕಾರ್ಯಕರ್ತರು ಮದುವೆ ಆಮಂತ್ರಣದ ಹಿನ್ನೆಲೆಯಲ್ಲಿ ನಗರದ ನೀಲಕಂಠೇಶ್ವರ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ಅಲ್ಲಿ ತಾಲ್ಲೂಕಿನ ಸಂಗಾಪುರ ಗ್ರಾಮದ ಜೋಡಿಯ ಮದುವೆ ನಡೆಯುತ್ತಿತ್ತು. ನೂತನ ವಧು-ವರರಿಗೆ ಆಶೀರ್ವದಿಸಿದ ನಾಯಕರು, ಬಿಜೆಪಿ ಸದಸ್ಯತ್ವ ಅಭಿಯಾನದ ಬಗ್ಗೆ ತಿಳಿಸಿ ಸ್ವಯಂಪ್ರೇರಿತ ಸದಸ್ಯತ್ವ ಪಡೆಯಲು ಮನವಿ ಮಾಡಿದರು.