ಬೆಂಗಳೂರು:ಕರ್ನಾಟಕ ವಿಧಾನ ಪರಿಷತ್ ಶಿಕ್ಷಕರ ಹಾಗೂ ಪದವೀಧರರ 6 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್ಡಿಎ ಒಕ್ಕೂಟ ತಲಾ 3 ಸ್ಥಾನಗಳನ್ನು ಗೆದ್ದಿವೆ. ಸದ್ಯ ಕಾಂಗ್ರೆಸ್ ಪಕ್ಷ ಮೇಲ್ಮನೆಯಲ್ಲಿ ಮೇಲುಗೈ ಸಾಧಿಸಿದ್ದರೂ ಕೂಡ ಬಿಜೆಪಿ-ಜೆಡಿಎಸ್ ದೋಸ್ತಿಗಳು ಬಹುಮತ ಹೊಂದಿದ್ದಾರೆ.
ಇದಕ್ಕೂ ಮುನ್ನ ವಿಧಾನಸಭೆಯಿಂದ ಪರಿಷತ್ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 7, ಬಿಜೆಪಿ 3 ಹಾಗೂ ಜೆಡಿಎಸ್ 1 ಸ್ಥಾನ ಗಳಿಸಿದೆ. ಈ ಗೆಲುವುಗಳ ಮೂಲಕ 75ರ ಸಂಖ್ಯಾಬಲದ ಮೇಲ್ಮನೆಯಲ್ಲಿ ಕಾಂಗ್ರೆಸ್ ಬಲ 34ಕ್ಕೇರಿದೆ. ಬಿಜೆಪಿ 30 ಸ್ಥಾನ ಹಾಗೂ ಜೆಡಿಎಸ್ ಸಂಖ್ಯಾಬಲ 8ಕ್ಕೆ ಏರಿಕೆ ಕಂಡಿದೆ.
ಚುನಾವಣೆಯ ಬಳಿಕ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ 34ಕ್ಕೇರಿದರೆ, ಬಿಜೆಪಿ ಸಂಖ್ಯಾಬಲ 30ಕ್ಕೆ ಇಳಿಕೆ ಕಂಡಿದೆ. ಆದರೆ, ಬಿಜೆಪಿ-ಜೆಡಿಎಸ್ ಮೈತ್ರಿ ಒಟ್ಟು 38 ಸದಸ್ಯ ಬಲದೊಂದಿಗೆ ಬಹುಮತ ಹೊಂದಿವೆ. ಹೀಗಾಗಿ, ದೋಸ್ತಿಗಳು ತಮ್ಮ ಪಾರುಪತ್ಯ ಮುಂದುವರೆಸಿದ್ದಾರೆ. ಹೀಗಾಗಿ, ಮೇಲ್ಮನೆಯಲ್ಲಿನ ಪ್ರಮುಖ ಬಿಲ್ಗಳ ಅಂಗೀಕಾರಕ್ಕೆ ಆಡಳಿತಾರೂಢ ಕಾಂಗ್ರೆಸ್ಗೆ ಸಂಖ್ಯಾಬಲದ ಕೊರತೆ ಎದುರಾಗಲಿದೆ.
2026ರವರೆಗೆ ದೋಸ್ತಿಗಳದ್ದೇ ದರ್ಬಾರ್:ವಿಧಾನ ಪರಿಷತ್ನಲ್ಲಿ ಬಹುಮತ ಪಡೆಯಲು ಕಾಂಗ್ರೆಸ್ 2026ರವರೆಗೆ ಕಾಯಲೇಬೇಕು. ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳೇ 2026ರ ಜುಲೈವರೆಗೆ ಮೇಲ್ಮನೆಯಲ್ಲಿ ಹೆಚ್ಚಿನ ಸಂಖ್ಯಾಬಲ ಹೊಂದಿರಲಿವೆ. ಇದು ಆಡಳಿತಾರೂಢ ಕಾಂಗ್ರೆಸ್ಗೆ ದೊಡ್ಡ ತಲೆನೋವಿನ ವಿಚಾರ.
ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ವಿಧಾನಸಭೆಯಿಂದ ಪರಿಷತ್ಗೆ ಆಯ್ಕೆಯಲ್ಲಿನ 1 ಸ್ಥಾನ ತೆರವಾಗಿದೆ. ವಿಧಾನಸಭೆಯಲ್ಲಿನ ಸಂಖ್ಯಾಬಲದ ಆಧಾರದಲ್ಲಿ ಆ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ. ಈ ಸ್ಥಾನಕ್ಕೆ ಈಗಾಗಲೇ ಕಾಂಗ್ರೆಸ್ ಬಸನಗೌಡ ಬಾದರ್ಲಿ ಅವರನ್ನು ಆಯ್ಕೆ ಮಾಡಿದೆ. ಆ ಗೆಲುವಿನ ಬಳಿಕ ಕಾಂಗ್ರೆಸ್ ಸಂಖ್ಯಾಬಲ 35ಕ್ಕೆ ಏರಿಕೆಯಾಗಲಿದೆ. ಮೇಲ್ಮನೆಯಲ್ಲಿ ಲಖನ್ ಜಾರಕಿಹೊಳಿ ಪಕ್ಷೇತರ ಸದಸ್ಯರಾಗಿದ್ದರೆ, ಸಭಾಪತಿ ಬಸವರಾಜ್ ಹೊರಟ್ಟಿ 1 ಸ್ಥಾನ ಹೊಂದಿದ್ದಾರೆ.
ಇದನ್ನೂ ಓದಿ:ಪರಿಷತ್ ಪದವೀಧರ-ಶಿಕ್ಷಕರ ಚುನಾವಣೆ: 3 ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ, 3 ಕಡೆ ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು - MLC Election Results
ಸಂಸದರಾಗಿರುವ ಕೋಟ ಶ್ರೀನಿವಾಸ್ ಪೂಜಾರಿ ರಾಜೀನಾಮೆಯಿಂದ ಮೇಲ್ಮನೆಯಲ್ಲಿ ಮತ್ತೊಂದು ಸ್ಥಾನ ತೆರವಾಗಲಿದೆ. ಕೋಟ ಅವರು ದಕ್ಷಿಣ ಕನ್ನಡದ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಜನವರಿ 2025ರಲ್ಲಿ ಜೆಡಿಎಸ್ ನಾಮನಿರ್ದೇಶಿತ ಕೆ.ಎ.ತಿಪ್ಪೇಸ್ವಾಮಿ ನಿವೃತ್ತಿ ಬಳಿಕ ಮತ್ತೊಂದು ಸ್ಥಾನ ಕಾಂಗ್ರೆಸ್ ಪಾಲಾಗಲಿದೆ. ಒಂದು ವೇಳೆ ಕಾಂಗ್ರೆಸ್ ಕೋಟ ಶ್ರೀನಿವಾಸ್ ಪೂಜಾರಿಯಿಂದ ತೆರವಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆದ್ದರೆ, ಕೈ ಪಕ್ಷದ ಸಂಖ್ಯಾಬಲ 37ಕ್ಕೆ ಏರಲಿದೆ.
ಆದರೆ, ಇದರ ಬಳಿಕವೂ ಬಿಜೆಪಿ-ಜೆಡಿಎಸ್ ದೋಸ್ತಿಗಳು ಮೇಲ್ಮನೆಯಲ್ಲಿ ತಮ್ಮ ಮೇಲುಗೈ ಮುಂದುವರೆಸಲಿದೆ. ಜುಲೈ 2026ರವರೆಗೆ ಆಡಳಿತಾರೂಢ ಕಾಂಗ್ರೆಸ್ ಮೇಲ್ಮನೆಯಲ್ಲಿ ಬಹುಮತ ಪಡೆಯುವುದಿಲ್ಲ. ಜೂನ್ 30, 2026ಕ್ಕೆ ವಿಧಾನಭೆಯಿಂದ ಪರಿಷತ್ಗೆ ಆಯ್ಕೆಯಾಗಿರುವ 7 ಸದಸ್ಯರ ಕಾಲಾವಧಿ ಮುಕ್ತಾಯವಾಗಲಿದೆ. ಜುಲೈ 21, 2026ಕ್ಕೆ ಐದು ಮಂದಿ ನಾಮನಿರ್ದೇಶಿತ ಸದಸ್ಯರ ಅವಧಿ ಮುಗಿಯಲಿದೆ. ಹೀಗಾಗಿ, ಆಡಳಿತಾರೂಢ ಕಾಂಗ್ರೆಸ್ ಬಹುಮತ ಗಳಿಸಬೇಕಾದರೆ 2026ರ ಜುಲೈವರೆಗೆ ಕಾಯಲೇಬೇಕು.
ಇದನ್ನೂ ಓದಿ:ವಿಧಾನಸಭೆಯಿಂದ ಪರಿಷತ್ಗೆ ಚುನಾವಣೆ: 11 ಅಭ್ಯರ್ಥಿಗಳು ಅವಿರೋಧ ಆಯ್ಕೆ - Council Election