ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಪ್ರತ್ಯೇಕವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಭರ್ಜರಿ ಪ್ರಚಾರ ನಡೆಸುತ್ತಿದ್ದು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ.
ಗೋಕಾಕ ಮತಕ್ಷೇತ್ರದ ಅಕ್ಕತಂಗೇರಹಾಳ ಗ್ರಾಮದಲ್ಲಿ ಮೃಣಾಲ್ ಪರ ಪ್ರಚಾರ ನಡೆಸಿದ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಮತ್ತು ಬಿಜೆಪಿ ವಿರುದ್ಧ ಗುಡುಗಿದರು. "ನಾನು ಡೆಲ್ಲಿ ತೋರಿಸ್ತೀನಿ, ಮುಂಬೈ ತೋರಿಸ್ತೀನಿ ಅಂತಾ ಸುಮ್ಮನೆ ಭಾಷಣ ಮಾಡಲ್ಲ. ಕಾಂಗ್ರೆಸ್ ಪಕ್ಷ, ಸಿಎಂ ಸಿದ್ಧರಾಮಯ್ಯ ಹಾಗೂ ನನ್ನ ಮೇಲೆ ವಿಶ್ವಾಸವಿಟ್ಟು ನನ್ನ ಮಗನನ್ನು ಡೆಲ್ಲಿಗೆ ಕಳುಹಿಸಿಕೊಟ್ಟರೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಾನೆ. ಸುಮ್ಮನೆ ಯಾರ ತಂಟೆಗೂ ನಾನು ಹೋಗುವುದಿಲ್ಲ. ಆದರೆ, ನನ್ನ ತಂಟೆಗೆ ಪದೇ ಪದೇ ಬರುತ್ತಿದ್ದಾರೆ. ನನ್ನ ತಂಟೆಗೆ ಬಂದರೆ ಅದಕ್ಕೆ ಜನರೇ ಉತ್ತರ ಕೊಡುತ್ತಾರೆ. ಈಗಾಗಲೇ ಜನ ಉತ್ತರ ಕೊಟ್ಟಿದ್ದಾರೆ. ನಾನು ಹೆಣ್ಮಗಳು, ಬಹಳ ಕಷ್ಟದಿಂದ ಬೆಳೆದು ಬಂದಿದ್ದೇನೆ. ಐದು ಬಾರಿ ಬಿಜೆಪಿಗೆ ಅವಕಾಶ ಕೊಟ್ಟಿದ್ದೀರಿ. ಈ ಬಾರಿ ಕಾಂಗ್ರೆಸ್‌ಗೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಹುಬ್ಬಳ್ಳಿಯವರು. ಬೆಳಗಾವಿಗೆ ಏನು ಅನ್ಯಾಯ ಮಾಡಿದ್ದಾರೆ ಅಂತಾ ಗೊತ್ತಿದೆ. ನರೇಂದ್ರ ಮೋದಿ ನೋಡಿ ಶೆಟ್ಟರ್‌ಗೆ ಮತ ಕೊಡಿ ಅಂತಿದ್ದಾರೆ. ಶೆಟ್ಟರ್ ಅವರು ಕಾಂಗ್ರೆಸ್‌ಗೆ ಯಾಕೆ ಬಂದರು? ಬಂದು ಬಿಜೆಪಿ, ಮೋದಿ, ಬಿ.ಎಸ್. ಯಡಿಯೂರಪ್ಪ ಅವರನ್ನು ಹಿಗ್ಗಾಮುಗ್ಗಾ ಬೈದರು. ಈಗ ಮರಳಿ ಬಿಜೆಪಿಗೆ ಹೋಗಿ ಮೋದಿ ದೇವರು ಅಂತಿದ್ದಾರೆ. ಬಿಜೆಪಿಯಿಂದ ಎಲ್ಲಾ ಅಧಿಕಾರ ಅನುಭವಿಸಿ, ಬಿಜೆಪಿ ಮೋಸ ಮಾಡಿದೆ ಎಂದಿದ್ದರು. ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಈಗ ಬೆಳಗಾವಿಯಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಹೆಬ್ಬಾಳ್ಕರ್ ಆಕ್ರೋಶ ಹೊರಹಾಕಿದರು.