ಬೆಂಗಳೂರು:ಬಿಟ್ ಕಾಯಿನ್ ಪ್ರಕರಣದಲ್ಲಿ ಆರೋಪಿಗಳನ್ನು ಅಕ್ರಮವಾಗಿ ತಮ್ಮ ವಶದಲ್ಲಿಟ್ಟುಕೊಂಡ ಆರೋಪ ಎದುರಿಸುತ್ತಿರುವ ಆಂತರಿಕ ಭದ್ರತಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್ ಕೆ.ಪೂಜಾರ್ ಅವರ ವಿರುದ್ಧ ಘೋಷಿತ ಆರೋಪಿ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾದ ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯ ಘೋಷಿತ ಆರೋಪಿ ಎಂದು ವಾರಂಟ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಡಿವೈಎಸ್‌ಪಿ ಶ್ರೀಧರ್ ಕೆ. ಪೂಜಾರ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀಷಾನಂದ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಘೋಷಿತ ಆರೋಪ ಎಂಬ ಆರೋಪವನ್ನು ರದ್ದುಪಡಿಸಿದೆ. ಆದರೆ, ಎಫ್‌ಐಆರ್‌ನ್ನು ರದ್ದುಪಡಿಸಲು ನಿರಾಕರಿಸಿದೆ. ಅಲ್ಲದೇ, ಮೇ 8ರಂದು ಬೆಳಗ್ಗೆ 9 ಗಂಟೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಕಸ್ಟಡಿಗೆ ಪಡೆದು ತನಿಖೆ ನಡೆಸಬೇಕು. ನಂತರ 2 ಲಕ್ಷ ರೂ. ಬಾಂಡ್ ಪಡೆದು ಬಿಡುಗಡೆ ಮಾಡಬೇಕು. ಪೊಲೀಸರ ತನಿಖೆಗೆ ಆರೋಪಿ ಶ್ರೀಧರ್.ಕೆ. ಪೂಜಾರ್ ಸಹಕರಿಸಬೇಕು ಎಂದು ತಿಳಿಸಿ ಹೈಕೋರ್ಟ್, ಅರ್ಜಿಯನ್ನು ಇತ್ಯರ್ಥ ಪಡಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ದೇಶದಲ್ಲಿ ಕಾನೂನು ಪಾಲಿಸುವ ನಾಗರಿಕರಾಗಿದ್ದು, ಉನ್ನತ ಹುದ್ದೆಯಲ್ಲಿದ್ದಾರೆ. ಅವರು ಯಾವುದೇ ಅಪರಾಧ ಮಾಡಿಲ್ಲ. ಆದರೆ, ಇಲ್ಲಿ ರಾಜಕೀಯ ಉದ್ದೇಶಕ್ಕಾಗಿ ಅವರ ವೃತ್ತಿಪರ ಘನತೆಯನ್ನು ಹಾಳು ಮಾಡುವ ಸಲುವಾಗಿ ಪ್ರಕರಣದಲ್ಲಿ ಅವರನ್ನು ಆರೋಪಿ ಎಂಬಂತೆ ಬಿಂಬಿಸಲಾಗಿದೆ.