ಬೆಂಗಳೂರು:ಸಾರ್ವಜನಿಕ ಸಂಪರ್ಕ ತಜ್ಞ ಮತ್ತು ನವದೆಹಲಿಯಲ್ಲಿ ಹಲವು ಕೇಂದ್ರ ಮಂತ್ರಿಗಳಿಗೆ ಕಾರ್ಯದರ್ಶಿಯಾಗಿದ್ದ ಬೈಕೆರೆ ನಾಗೇಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಇಂದು ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ಪತ್ನಿ ಸುಗುಣ ಮತ್ತು ಪುತ್ರಿ ಅರ್ಪಿತಾ ಅವರನ್ನು ನಾಗೇಶ್ ಅಗಲಿದ್ದಾರೆ.
ಕೇಂದ್ರ ಸಚಿವಾಲಯದಲ್ಲಿ ಅತೀ ಹೆಚ್ಚು, ಅಂದರೆ 10 ಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ನಾಗೇಶ್ ಹಿರಿಯ ರಾಜಕಾರಣಿ ಹೆಚ್ ಡಿ ದೇವೇಗೌಡರು ಪ್ರಧಾನಿ ಆದ ಸಂದರ್ಭದಲ್ಲೂ ಅವರ ಕಾರ್ಯದರ್ಶಿಯಾಗಿದ್ದರು. ಜಾಫರ್ ಷರೀಫ್, ಗುರುಪಾದಸ್ವಾಮಿ, ಸಂಜಯ ಸಿಂಗ್, ರಾಮಕೃಷ್ಣ ಹೆಗಡೆ, ಚಮನಲಾಲ್ ಗುಪ್ತ, ಧನಂಜಯ ಕುಮಾರ್, ಎಂ.ವಿ ರಾಜಶೇಖರ್, ಅನಂತ ಕುಮಾರ್, ಸದಾನಂದ ಗೌಡ, ಎ. ನಾರಾಯಣಸ್ವಾಮಿ ಅವರ ಆಪ್ತ ಕಾರ್ಯದರ್ಶಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು.
ಬೈಕೆರೆ ನಾಗೇಶ್ ಅವರ ಸೇವೆಯ ಗಮನಾರ್ಹ ಅಂಶವೆಂದರೆ ಕೇಂದ್ರ ಸರ್ಕಾರದಿಂದ ಬಗೆಹರಿಸಬೇಕಾಗಿದ್ದ ಕರ್ನಾಟಕದ ಹಲವಾರು ಅಭಿವೃದ್ಧಿ ಕಾರ್ಯಯೋಜನೆಗಳ ಅಧ್ಯಯನ ಮತ್ತು ಕೇಂದ್ರ ಮಂತ್ರಿಗಳಿಗೆ ಸೂಕ್ತ ಸಲಹೆ ನೀಡಿ, ಅನುಮತಿ ಮತ್ತು ಅನುಷ್ಠಾನಕ್ಕೆ ಸಹಾಯ ಮಾಡುತ್ತಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ಮೊದಲ ಬಾರಿಗೆ ಬರುತ್ತಿದ್ದ ಅಸಹಾಯಕ ಕನ್ನಡಿಗರಿಗೆ ಅವರು ಮಾರ್ಗದರ್ಶನ ಮತ್ತು ಸಮಯೋಚಿತ ನೆರವು ನೀಡುತ್ತಿದ್ದರು. ನೂರಾರು ಮಂದಿ ಗ್ರಾಮೀಣ ಯುವಜನರಿಗೆ ತಾತ್ಕಾಲಿಕ ವಸತಿ ಮತ್ತು ದಿಲ್ಲಿಗೆ ಮತ್ತು ಬೆಂಗಳೂರಿಗೆ ರೈಲ್ವೆ ಸ್ಥಳ ಕಾದಿರಿಸಲು ಸಹಾಯ ಮಾಡುತ್ತಿದ್ದರು.
ನಾಗೇಶ್ ಅವರು ತಮ್ಮ ಹುಟ್ಟೂರು ಸಕಲೇಶಪುರ ಮತ್ತು ಬೈಕೆರೆಯ ಅಭಿವೃದ್ಧಿಗೆ ಹಲವಾರು ವಿಧದಲ್ಲಿ ಶ್ರಮಿಸಿದ್ದರು. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದ ನಂತರ ಸ್ವಗ್ರಾಮ ಬೈಕೆರೆಯಲ್ಲಿ ಅಂತಿಮಸಂಸ್ಕಾರ ನೆರವೇರಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದನ್ನೂ ಓದಿ:ಖ್ಯಾತ ಉರ್ದು ಕವಿ ಮುನವ್ವರ್ ರಾಣಾ ನಿಧನ