ಬೆಂಗಳೂರು: ಖಾಸಗಿ ವಾಟರ್ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಮುಂದಾಗಿದೆ. ನಗರದಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡಿದ್ದ ವಾಟರ್ ಟ್ಯಾಂಕರ್ ಮಾಲೀಕರ ಕಳ್ಳಾಟಕ್ಕೆ ಬ್ರೇಕ್ ಹಾಕಿ ನೀರಿನ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.
ವಾಟರ್ ಟ್ಯಾಂಕರ್ ದರ ನಿಗದಿ:ಸತತವಾಗಿ ಟ್ಯಾಂಕರ್ ಮಾಲೀಕರ ಜೊತೆ ಸಭೆ ನಡೆಸಿ ಈ ಆದೇಶ ಹೊರಡಿಸಲಾಗಿದೆ. 5 ಕಿಮೀ ಒಳಗಿನ ವ್ಯಾಪ್ತಿಯಲ್ಲಿ ನೀರು ಸರಬರಾಜು ಮಾಡುವ 6 ಸಾವಿರ ಲೀಟರ್ ಟ್ಯಾಂಕರ್‌ಗೆ 600 ರೂ ಹಾಗೂ 10 ಕಿಮೀ ಒಳಗಿನ ವ್ಯಾಪ್ತಿಗೆ 750 ರೂ ನಿಗದಿಪಡಿಸಲಾಗಿದೆ. ಇನ್ನು 5 ಕಿಮೀ ಒಳಗಿನ 8 ಸಾವಿರ ಲೀಟರ್ ನೀರಿನ ಟ್ಯಾಂಕರ್‌ಗೆ 700 ರೂ ಹಾಗೂ 10 ಕಿಮೀ ಒಳಗಿನ 8 ಸಾವಿರ ಲೀಟರ್ ನೀರಿಗೆ 850 ರೂ ದರವನ್ನು ನಿಗದಿಪಡಿಸಲಾಗಿದೆ.
ಉಳಿದಂತೆ 5 ಕಿಮೀ ಒಳಗಿನ 1200 ಲೀಟರ್ ನೀರಿನ ಟ್ಯಾಂಕರ್‌ಗೆ 1000 ರೂ ಹಾಗೂ 10 ಕಿಮೀ ಒಳಗೆ ಕಾರ್ಯನಿರ್ವಹಿಸುವ 1200 ಲೀಟರ್ ಟ್ಯಾಂಕರ್‌ಗೆ 1200 ರೂ ಗೊತ್ತುಪಡಿಸಲಾಗಿದೆ. ಈ ದರಗಳು ಜಿಎಸ್‌ಟಿಯನ್ನೂ ಒಳಗೊಂಡಿವೆ.
ಇದನ್ನೂ ಓದಿ: ಬೆಂಗಳೂರಿಗೆ ಜಲಕ್ಷಾಮ; ಹಲವೆಡೆ ಹನಿ ನೀರಿಗೂ ಹಾಹಾಕಾರ
ಕುಡಿಯುವ ನೀರು ಸರಬರಾಜಿಗೆ ಖಾಸಗಿ ನೀರಿನ ಟ್ಯಾಂಕರ್‌ಗಳ ದರ ನಿಗದಿಪಡಿಸಿ ನಗರ ಜಿಲ್ಲಾಡಳಿತ ಆದೇಶ ಪ್ರತಿಗಳನ್ನು ಬಿಬಿಎಂಪಿ ಮುಖ್ಯ ಆಯುಕ್ತರು, ಕಂದಾಯ ಇಲಾಖೆ, ಬೆಂಗಳೂರು ಜಲ ಮಂಡಳಿ ಅಧ್ಯಕ್ಷರು ಮತ್ತು ಪ್ರಧಾನ ಅಭಿಯಂತರರು ಹಾಗೂ ಬಿಬಿಎಂಪಿ ಪ್ರಧಾನ ಅಭಿಯಂತರ ಕಚೇರಿಗೆ ಕಳುಹಿಸಿದೆ.