ಹಾವೇರಿ : ಬೆಂಗಳೂರಿನ ಚಾಮರಾಜಪೇಟಿಯ ವಿನಾಯಕ ನಗರದ ಹಸುಗಳ ಕೆಚ್ಚಲು ಕತ್ತರಿಸಿದ ಘಟನೆಗೆ ಹಾವೇರಿಯ ಬಣ್ಣದಮಠದ ಅಭಿನವ ಚೆನ್ನಮಲ್ಲಿಕಾರ್ಜುನ ಶ್ರೀಗಳು ತೀವ್ರ ಬೇಸರ ವ್ಯಕ್ತಪಡಿಸಿದರು. ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ತಾಯಿ ಹಾಲಿಗಿಂತ ಹೆಚ್ಚು ಗೋವಿನ ಹಾಲು ಕುಡಿದು ಬೆಳೆದವನು. ಇಂತಹ ಕೃತ್ಯವೆಸಗಿದ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ಆರೋಪಿಗಳು ಹಸುವಿನ ಕೆಚ್ಚಲು ಕೊಯ್ದು ಆಮಾನವೀಯವಾಗಿ ವರ್ತಿಸಿದ್ದಾರೆ. ಗೋಮಾತೆ ಯಾವುದೇ ಜಾತಿಮತಗಳನ್ನು ನೋಡದೆ ಎಲ್ಲರಿಗೂ ಹಾಲು ನೀಡುತ್ತೆ. ಎಲ್ಲ ಜಾತಿಮತಗಳು ಸಹ ಗೋವುಗಳ ಸಂರಕ್ಷಣೆ ಮಾಡಬೇಕು. ಇಂತಹ ಸಂದರ್ಭದಲ್ಲಿ ಕಿಡಿಗೇಡಿಗಳು ಹಸುವಿನ ಕೆಚ್ಚಲು ಕತ್ತರಿಸಿದ ಘಟನೆ ಶೋಚನೀಯ ಎಂದು ಶ್ರೀಗಳು ಹೇಳಿದರು.
ಜಾತಿ-ಮತಗಳನ್ನು ನೋಡದೆ ಹಾಲು ನೀಡುವ ಹಸುಗಳ ಮೇಲಿನ ಕೃತ್ಯ ಖಂಡಿಸಿದ ಸ್ವಾಮೀಜಿ (ETV Bharat) ಇನ್ನು, ಈ ರೀತಿಯ ಘಟನೆಗಳು ನಡೆದಾಗ ಹಿಂದೂ ಸಂಘಟನೆಗಳು ಉದ್ರಿಕ್ತರಾಗುವ ಸಾಧ್ಯತೆ ಇದೆ. ಆದರೆ ಈ ಸಂದರ್ಭದಲ್ಲಿ ಉದ್ರಿಕ್ತರಾಗುವ ಬದಲು ಯೋಚನೆ ಮಾಡಿ ಹೆಜ್ಜೆ ಇಡುವಂತೆ ಶ್ರೀಗಳು ಸಲಹೆ ನೀಡಿದರು. ರಾಜ್ಯದಲ್ಲಿ ಈ ರೀತಿಯ ಕಾರ್ಯಗಳು ನಿಲ್ಲಬೇಕು, ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಣ್ಣದಮಠ ಶ್ರೀಗಳು ಒತ್ತಾಯಿಸಿದರು.
ಕಳೆದ ವರ್ಷ ನಡೆದಿದ್ದ ವಕ್ಫ್ ಹೋರಾಟದಲ್ಲಿ ಚಾಮರಾಜಪೇಟಿಯ ಪಶುಆಸ್ಪತ್ರೆ ಸಹ ವಕ್ಫ್ ಆಸ್ತಿ ಎಂದು ತೋರಿಸಲಾಗಿತ್ತು. ಈ ನಿಟ್ಟಿನಲ್ಲಿ ಅಂದು ಹಸುಗಳನ್ನು ರಸ್ತೆಯಲ್ಲಿ ಕಟ್ಟಿಹಾಕಿ ಪ್ರತಿಭಟನೆ ಮಾಡಲಾಗಿತ್ತು. ಇದೀಗ ಆರೋಪಿಗಳು ಪ್ರತಿಭಟನೆಗೆ ಬಳಸಿದ ಹಸುಗಳ ಕೆಚ್ಚಲು ಕತ್ತರಿಸುವಂತಹ ದುಷ್ಕೃತ್ಯಗಳು ನಡೆಯಬಾರದು. ಗೋವಿಗೆ ಈ ರೀತಿಯ ಹಿಂಸೆ ನೀಡಬಾರದು, ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ರಾಜ್ಯದಲ್ಲಿ ಗೋವುಗಳ ವಧೆ ತಡೆಯಬೇಕು, ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಎಲ್ಲ ಸ್ವಾಮೀಜಿಗಳು ಸಂಘಟನೆಯಾಗಿ ಇದರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನ ಶ್ರೀಗಳು ಸರ್ಕಾರಕ್ಕೆ ರವಾನಿಸಿದರು.
ತಪ್ಪಿತಸ್ಥರಿಗೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸಿಎಂ;ಈ ಪ್ರಕರಣ ಕುರಿತು ವಿಜಯನಗರದಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಹಸುಗಳ ಕೆಚ್ಚಲು ಕೊಯ್ದಿರುವುದು ತಪ್ಪು. ಇದನ್ನು ಯಾರು ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಪೊಲೀಸ್ ಕಮಿಷನರ್ ಜೊತೆ ಮಾತನಾಡಿದ್ದೇನೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವಂತೆ ಹೇಳಿದ್ದೇನೆ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗುತ್ತದೆ ಎಂದು ಹೇಳಿದರು.
ಈ ಕೃತ್ಯವನ್ನು ಪ್ರತಿಪಕ್ಷ ನಾಯಕ ಆರ್. ಅಶೋಕ್, ಕೇಂದ್ರ ಸಚಿವ ಕುಮಾರಸ್ವಾಮಿ ಸೇರಿದಂತೆ ರಾಜಕೀಯ ನಾಯಕರು, ಸಂಘಟನೆಗಳ ಮುಖಂಡರು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಹಸುಗಳ ಕೆಚ್ಚಲು ಕೊಯ್ದ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ: ಸಿಎಂ ಸಿದ್ದರಾಮಯ್ಯ