ಕರ್ನಾಟಕ

karnataka

ಮುಡಾದಲ್ಲಿ 2,500 ಕೋಟಿಗೂ ಹೆಚ್ಚು ಹಗರಣ ನಡೆದಿದೆ: ಶಾಸಕ ಶ್ರೀವತ್ಸ - MLA Srivatsa

By ETV Bharat Karnataka Team

Published : Jul 2, 2024, 5:57 PM IST

Updated : Jul 2, 2024, 6:15 PM IST

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ 2,500 ಕೋಟಿಗೂ ಹೆಚ್ಚು ಭೂಹಗರಣ ನಡೆದಿದೆ. ಈ ಹಗರಣವನ್ನು ಮುಚ್ಚಿಹಾಕಲು ಸಚಿವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ ಎಂದು ಶಾಸಕ ಶ್ರೀವತ್ಸ ದೂರಿದ್ದಾರೆ.

ಶಾಸಕ ಶ್ರೀವತ್ಸ
ಶಾಸಕ ಶ್ರೀವತ್ಸ (ETV Bharat)

ಶಾಸಕ ಶ್ರೀವತ್ಸ (ETV Bharat)

ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 2,500 ಕೋಟಿಗೂ ಹೆಚ್ಚು ಭೂಹಗರಣ ನಡೆದಿದ್ದು, ಇದನ್ನು ಮುಚ್ಚಿಹಾಕಲು ಸಚಿವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ಸಂಬಂಧ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮೈಸೂರು ನಗರ ಬಿಜೆಪಿ ಶಾಸಕ ಶ್ರೀವತ್ಸ ಒತ್ತಾಯಿಸಿದ್ದಾರೆ.

ತಮ್ಮ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಂದರೆ ಮುಡಾದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ನಾನು ಬೆಂಗಳೂರಿನ ನಗರಾಭಿವೃದ್ಧಿ ಕಾರ್ಯದರ್ಶಿ ಅವರಿಗೆ ದೂರು ನೀಡಿದ್ದೆ. ದೂರಿನನ್ವಯ ನಗರಾಭಿವೃದ್ಧಿ ಕಾರ್ಯದರ್ಶಿಗಳು ಮುಡಾಕ್ಕೆ ತನಿಖಾಧಿಕಾರಿಗಳನ್ನ ಕಳುಹಿಸಿ ಪರಿಶೀಲನೆ ನಡೆಸಿ 140ಕ್ಕೂ ಹೆಚ್ಚು ಕಡತಗಳನ್ನು ತೆಗೆದುಕೊಂಡು ಹೋಗಿ ಪರಿಶೀಲನೆ ನಡೆಸಿದ್ದಾರೆ ಎಂದರು.

ಈ ಮಧ್ಯೆ ಮುಡಾದಲ್ಲಿ ನಡೆದ ಅವ್ಯವಹಾರಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಯಿಂದ ಎಚ್ಚೆತ್ತ ಸಚಿವ ಬೈರತಿ ಸುರೇಶ್ ನಿನ್ನೆ ದಿಢೀರನೆ ಯಾರಿಗೂ ಮಾಹಿತಿ ನೀಡದಂತೆ ಹೆಲಿಕಾಪ್ಟರ್​ನಲ್ಲಿ ಬಂದು ಮುಡಾ ಕಚೇರಿಯಲ್ಲಿ ದಾಖಲೆಗಳನ್ನ ಪರಿಶೀಲಿಸಿ ಬಳಿಕ ಮಾಧ್ಯಮಗೋಷ್ಟಿ ನಡೆಸಿ, ಮುಡಾ ಆಯುಕ್ತ ದಿನೇಶ್ ಕುಮಾರ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನ ವರ್ಗಾವಣೆ ಮಾಡಿ, ತನಿಖೆಗೆ ಐಎಎಸ್ ಅಧಿಕಾರಿಗಳನ್ನು ನೇಮಿಸುವುದಾಗಿ ಪ್ರಕಟಿಸಿದರು. ಆದರೆ ಹಗರಣಗಳ ಬಗ್ಗೆ ದೂರು ನೀಡಿದ ಹಾಗೂ ಮುಡಾದ ಸದಸ್ಯನಾದ ನನ್ನುನ್ನು ಸಭೆಗೆ ಕರೆದಿಲ್ಲ ಎಂದು ದೂರಿದರು.

ಮುಡಾದಲ್ಲಿ ಸೈಟ್ ಹಂಚಿಕೆ ಸೇರಿದಂತೆ ಇತರ ಎಲ್ಲಾ ಕಡೆ ಅವ್ಯವಹಾರ ನಡೆದಿದ್ದು, ಕಳೆದ 4 ವರ್ಷಗಳಲ್ಲಿ 50:50 ಸೈಟು ಹಂಚಿಕೆ ಅವ್ಯವಹಾರದಲ್ಲಿ 2,500 ಕೋಟಿಗೂ ಹೆಚ್ಚು ಅವ್ಯವಹಾರ ಆಗಿದೆ. ಇದನ್ನು ಮುಖ್ಯಮಂತ್ರಿಗಳು ಉನ್ನತ ಮಟ್ಟದ ತನಿಖೆಗೆ ನೀಡಬೇಕು. ಮೈಸೂರು ಮುಡಾದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರಿಗೆ ದಾಖಲಾತಿ ನೀಡುತ್ತೇನೆ. ಈ ಸಂಬಂಧ ವಿಧಾನಸೌಧದ ಒಳಗೂ ಮತ್ತು ಹೊರಗೂ ಪ್ರತಿಭಟನೆ, ಹೋರಾಟ ನಡೆಸುತ್ತೇವೆ ಎಂದು ಶಾಸಕರು ತಿಳಿಸಿದರು.

ಇದನ್ನೂ ಓದಿ:ಮುಡಾ ಹಗರಣ: ಕಮಿಷನರ್ ಎತ್ತಂಗಡಿ, ತನಿಖೆಗೆ ಐಎಎಸ್‌ ಅಧಿಕಾರಿಗಳ ನೇಮಕ - Muda Scam

Last Updated : Jul 2, 2024, 6:15 PM IST

ABOUT THE AUTHOR

...view details