ಕೋಯಿಕ್ಕೋಡ್/ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್ಗೆ ಕೇರಳ ಮೂಲದ ಈಜುಪಟು ಧಿನಿಧಿ ದೇಸಿಂಗು ತೆರಳುತ್ತಿದ್ದಾರೆ. ಅವರು ದೆಹಲಿಯಲ್ಲಿಂದು ನಡೆದ ಪ್ಯಾರಿಸ್ಗೆ ತೆರಳುವ ಕ್ರೀಡಾಪಟುಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಜೊತೆಗೆ ಪ್ರಧಾನಿಯೊಂದಿಗೆ ಸಂವಾದ ಕೂಡಾ ನಡೆಸಿದರು.
ಈ ವೇಳೆ ಮಾತನಾಡಿದ ಈಜುಪಟು ಧಿನಿಧಿ ದೇಸಿಂಗು, "ನಾನು ಧಿನಿಧಿ ದೇಸಿಂಗು, ನನಗೆ ಹದಿನಾಲ್ಕು ವರ್ಷ, ನಾನು ಮೂಲತಃ ಕೇರಳದವನಾದರೂ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದೇನೆ. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಇದು ನನ್ನ ಕ್ರೀಡಾ ವೃತ್ತಿಜೀವನದ ಆರಂಭವಷ್ಟೇ. ಪ್ರತಿಭಾವಂತ ಆಟಗಾರರನ್ನು ಹೊಂದಿರುವ ಭಾರತ ತಂಡದ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ಖಂಡಿತ, ನಾವು ದೇಶದ ಕೀರ್ತಿಯನ್ನು ಹೆಚ್ಚಿಸುತ್ತೇವೆ ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭಾರತದ ಅತ್ಯಂತ ಕಿರಿಯ ಆಟಗಾರ್ತಿ:ಪ್ರಧಾನಿ ನರೇಂದ್ರ ಮೋದಿ ಅವರು ಧಿನಿಧಿ ದೇಸಿಂಗು ಯಶಸ್ಸಿಗೆ ಶುಭ ಹಾರೈಸಿದರು. ಗುಂಪಿನಲ್ಲಿದ್ದ ಪಿ.ಆರ್.ಶ್ರೀಜೇಶ್, ದೀಪಿಕಾ ಕುಮಾರಿ ಸೇರಿದಂತೆ ಹಿರಿಯ ಅಥ್ಲೀಟ್‌ಗಳು ಚಪ್ಪಾಳೆ ತಟ್ಟಿ ತಮ್ಮ ಗುಂಪಿನ ಯುವ ತಾರೆಯನ್ನು ಪ್ರೋತ್ಸಾಹಿಸಿದರು. ಫೋಟೋ ಸೆಷನ್ ಸಮಯದಲ್ಲಿ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷೆ ಪಿಟಿ ಉಷಾ ಅವರು ಧಿನಿಧಿ ದೇಸಿಂಗು ಅವರನ್ನು ಕರೆದು ಮುಂದಿನ ಸಾಲಿನಲ್ಲಿ ತಮ್ಮ ಬಳಿ ನಿಲ್ಲಿಸಿಕೊಂಡರು. ಧಿನಿಧಿ ದೇಸಿಂಗು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಧಿನಿಧಿ ಹಿನ್ನೆಲೆ ಏನು?: ಧಿನಿಧಿ ಕೋಯಿಕ್ಕೋಡ್ನ ಪುತ್ಯಂಗಡಿ ಮೂಲದ ಜೆಸಿತಾ ವಿಜಯನ್ ಮತ್ತು ತಮಿಳುನಾಡು ಮೂಲದ ದೇಸಿಂಗು ಅವರ ಪುತ್ರಿ. ಒಂಬತ್ತನೇ ತರಗತಿ ಓದುತ್ತಿರುವ ಧಿನಿಧಿ, ಬೆಂಗಳೂರಿನ ತಮ್ಮ ಫ್ಲಾಟ್ ಲೈಫ್‌ನಲ್ಲಿ ಬೋರಿಂಗ್ನಿಂದ ಪಾರಾಗಲು ಈಜುಕೊಳದಲ್ಲಿ ಈಜಲು ಪ್ರಾರಂಭಿಸಿದ್ದರು. ಈಗ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ಸಾಕಷ್ಟು ತ್ಯಾಗ ಮಾಡಬೇಕಾಯಿತು ಎನ್ನುತ್ತಾರೆ ಧಿನಿಧಿ.