ಕರ್ನಾಟಕ

karnataka

ETV Bharat / spiritual

ಮಾತಾ ಖೀರ್ ಭವಾನಿ ದೇವಾಲಯದ ಬುಗ್ಗೆಯಲ್ಲಿ ಈ ಬಾರಿ ಗುಲಾಬಿ ಬಣ್ಣದ ನೀರು; ಏನಿದು ಶಕುನ? - Mata Kheer Bhawani Temple - MATA KHEER BHAWANI TEMPLE

ಶ್ರೀನಗರದಲ್ಲಿರುವ ಹಿಂದೂ ದೇವತೆ ಮಾತಾ ಖೀರ್ ಭವಾನಿ ದೇವಾಲಯದ ನೀರಿನ ಬುಗ್ಗೆಯಲ್ಲಿ ಗುಲಾಬಿ ಬಣ್ಣದ ನೀರು ಚಿಮ್ಮಿದ್ದು, ಈ ಸಂದರ್ಭವನ್ನು ಕಣ್ತುಂಬಿಕೊಳ್ಳಲು 50 ಸಾವಿರ ಭಕ್ತಾದಿಗಳು ಆಗಮಿಸಿದ್ದಾರೆ.

ಮಾತಾ ಖೀರ್ ಭವಾನಿ ದೇವಾಲಯದ ಬುಗ್ಗೆ
ಮಾತಾ ಖೀರ್ ಭವಾನಿ ದೇವಾಲಯದ ಬುಗ್ಗೆ (IANS)

By ETV Bharat Karnataka Team

Published : Jun 14, 2024, 5:49 PM IST

ಶ್ರೀನಗರ: ವಾರ್ಷಿಕ ಧಾರ್ಮಿಕ ಮೇಳದ ಅಂಗವಾಗಿ ಕಾಶ್ಮೀರದ ಶ್ರೀನಗರದಲ್ಲಿರುವ ಹಿಂದೂ ದೇವತೆ ಮಾತಾ ಖೀರ್ ಭವಾನಿ ದೇವಾಲಯದಲ್ಲಿ ಇಂದು ಸಾವಿರಾರು ಭಕ್ತರು ಜಮಾಯಿಸಿದ್ದಾರೆ.

ಮಾತಾ ಖೀರ್ ಭವಾನಿಯ ಆರಾಧನೆಯು ಕಾಶ್ಮೀರಿ ಪಂಡಿತರ ಸಾಂಪ್ರದಾಯಿಕ ಹಬ್ಬವಾಗಿದೆ. ಮಹಾ ರಾಗಿನಾ ಭಗವತಿಗೆ ಸಮರ್ಪಿತವಾದ ಖೀರ್ ಭವಾನಿ ದೇವಾಲಯವನ್ನು ಪವಿತ್ರವೆಂದು ನಂಬಲಾದ ಬುಗ್ಗೆಯೊಂದರ ಮೇಲೆ ನಿರ್ಮಿಸಲಾಗಿದೆ. ಈ ದೇವಾಲಯವು ರಾಗಿನಾ ದೇವಿಗೆ ಸಂಬಂಧಿಸಿದ್ದಾಗಿದ್ದು, ದುರ್ಗಾ ದೇವಿಯ ಅವತಾರವಾದ ಈ ದೇವತೆಯನ್ನು ರಾಗಿನ್ಯಾ ಅಥವಾ ಖೀರ್ ಭವಾನಿ ಎಂದೂ ಪೂಜಿಸಲಾಗುತ್ತದೆ.

ಖೀರ್ ಭವಾನಿ ದೇವಾಲಯವು ಕಾಶ್ಮೀರದ ಹಿಂದೂ-ಮುಸ್ಲಿಂ ಸಹೋದರತ್ವದ ಸಂಕೇತವೆಂದು ಗುರುತಿಸಲ್ಪಟ್ಟಿದೆ. ದೇವಾಲಯದ ಸಂಕೀರ್ಣದ ಸುತ್ತಲೂ ವಾಸಿಸುವ ಸ್ಥಳೀಯ ಮುಸ್ಲಿಮರು ತುಲ್ಲಾಮುಲ್ಲಾ ಪಟ್ಟಣಕ್ಕೆ ಆಗಮಿಸಿದ ಕಾಶ್ಮೀರಿ ಪಂಡಿತ ಭಕ್ತರಿಗೆ ಮಣ್ಣಿನ ಮಡಕೆಗಳಲ್ಲಿ ಹಾಲು ನೀಡುತ್ತಾರೆ.

1990 ರ ದಶಕದಲ್ಲಿ ಕಾಶ್ಮೀರದಿಂದ ವಲಸೆ ಹೋದಾಗಿನಿಂದ, ದೇಶದ ವಿವಿಧ ಭಾಗಗಳಿಂದ ಕಾಶ್ಮೀರಿ ಪಂಡಿತರು ಈ ದೇವಾಲಯದಲ್ಲಿ ಪ್ರಾರ್ಥಿಸಲು ಮತ್ತು ಪೂಜಿಸಲು ಆಗಮಿಸುತ್ತಾರೆ. ಸುಮಾರು 50,000 ಭಕ್ತರು ಶುಕ್ರವಾರ ದೇವಾಲಯಕ್ಕೆ ಆಗಮಿಸಿದ್ದಾರೆ. 1990 ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂಸಾಚಾರ ಪ್ರಾರಂಭವಾದಾಗಿನಿಂದ ಈ ದೇವಾಲಯಕ್ಕೆ ಆಗಮಿಸಿದ ಅತ್ಯಧಿಕ ಭಕ್ತರ ಸಂಖ್ಯೆ ಇದಾಗಿದೆ.

ಜಮ್ಮುವಿನಿಂದ ವಿಶೇಷ ಬೆಂಗಾವಲು ವಾಹನಗಳ ಮೂಲಕ ಭಕ್ತರನ್ನು ಇಲ್ಲಿಗೆ ಕರೆತರಲಾಯಿತು. ದೇವಾಲಯದ ಸಂಕೀರ್ಣ ಮತ್ತು ನೆರೆಯ ಕಾಶ್ಮೀರ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ಮೈದಾನದಲ್ಲಿ ಇವರ ವಸತಿಗೆ ಸರ್ಕಾರ ವ್ಯವಸ್ಥೆ ಮಾಡಿದೆ. ಆಡಳಿತವು ನೈರ್ಮಲ್ಯ, ಸುರಕ್ಷಿತ ಕುಡಿಯುವ ನೀರು, ಆರೋಗ್ಯ ಮತ್ತು ಭಕ್ತರಿಗೆ ಭದ್ರತೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಿತ್ತು.

ಕಣಿವೆಯಿಂದ ವಲಸೆ ಹೋಗದ ಕೆಲವು ಸ್ಥಳೀಯ ಪಂಡಿತರು ತಮ್ಮದೇ ಆದ ಸಾರಿಗೆ ಸಾಧನಗಳ ಮೂಲಕ ತುಲ್ಲಾಮುಲ್ಲಾಗೆ ಬಂದರು. ಶ್ರೀನಗರ ಪಟ್ಟಣದಿಂದ ದೇವಾಲಯದವರೆಗಿನ 24 ಕಿ.ಮೀ ಉದ್ದದ ರಸ್ತೆಯಲ್ಲಿ ಭಕ್ತರ ಸುರಕ್ಷತೆಗಾಗಿ ದೊಡ್ಡ ಪ್ರಮಾಣದ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ.

ದೇವರ ವಿಗ್ರಹವನ್ನು ಇರಿಸಲಾಗಿರುವ ಪವಿತ್ರ ಬುಗ್ಗೆಯ ಬಣ್ಣವು ಭಕ್ತರ ಪಾಲಿಗೆ ವಿಶೇಷ ಮಹತ್ವವನ್ನು ಹೊಂದಿದೆ. ಶಾಂತಿಯ ಸಮಯದಲ್ಲಿ ಬುಗ್ಗೆಯ ನೀರಿನ ಬಣ್ಣವು ಬಿಳಿ ಅಥವಾ ಗುಲಾಬಿ ಆಗಿರುತ್ತದೆ ಮತ್ತು ಕೆಟ್ಟ ಸಮಯದಲ್ಲಿ ಬಣ್ಣವು ಕಪ್ಪು ಅಥವಾ ಕೆಸರು ಬಣ್ಣಕ್ಕೆ ತಿರುಗುತ್ತದೆ. ಈ ವರ್ಷ, ಬುಗ್ಗೆಯ ನೀರಿನ ಬಣ್ಣ ಗುಲಾಬಿಯಾಗಿದೆ. ಹೀಗಾಗಿ ಇದು ದೇಶದಲ್ಲಿ ಶಾಂತಿ ಮತ್ತು ಸಮೃದ್ಧಿ ನೆಲೆಸಲಿರುವುದನ್ನು ಸೂಚಿಸುತ್ತದೆ ಎಂದು ಭಕ್ತರು ಭಾವಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಶುಕ್ರವಾರ ದೇವಾಲಯಕ್ಕೆ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಕೂಡ ದೇವಾಲಯಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ : ಲಕ್ಷ್ಮಿ ದೇವಿ ಒಲಿಸಿಕೊಳ್ಳಲು ಈ ಸೂತ್ರಗಳನ್ನು ತಪ್ಪದೇ ಪಾಲಿಸಿ.. ಅದ್ಬುತಗಳ ಅನುಭವ ಪಡೆಯಿರಿ! - How To Impress Goddess Laxmi

ABOUT THE AUTHOR

...view details