ವಾಷಿಂಗ್ಟನ್:ಇಟಲಿಯಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಮುಖಾಮುಖಿ ಆಗಲಿದ್ದು, ಸಿಖ್ ಪ್ರತ್ಯೇಕತಾವಾದಿ ಮುಖಂಡನ ಹತ್ಯೆ ವಿಚಾರ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಇದರ ಜತೆಗೆ ಎರಡೂ ರಾಷ್ಟ್ರಗಳ ನಡುವಣ ಸಂಬಂಧ ವೃದ್ಧಿ ಬಗ್ಗೆ ಮಾತುಕತೆ ನಡೆಯುವ ಸಾಧ್ಯತೆಗಳಿವೆ ಎಂದು ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವನ್ ತಿಳಿಸಿದ್ದಾರೆ.
ಈ ಬಗ್ಗೆ ಬುಧವಾರ ಪ್ರತಿಕ್ರಿಯೆ ನೀಡಿರುವ ಅವರು, ಬೈಡನ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಜಿ7 ಸಭೆಯಲ್ಲಿ ಪ್ರಸ್ತಾಪವಾಗಲಿರುವ ಹಲವಾರು ವಿಷಯಗಳ ಕುರಿತು ಉಭಯ ನಾಯಕರ ಮಧ್ಯೆ ಚರ್ಚೆಗಳು ನಡೆಯಲಿವೆ. ಅದರಲ್ಲೂ ಸಿಖ್ ಪ್ರತ್ಯೇಕತಾವಾದಿ ನಾಯಕನ ಹತ್ಯೆ ಪ್ರಕರಣದ ಬಗ್ಗೆ ಅಮೆರಿಕ ಉನ್ನತ ಮಟ್ಟದಲ್ಲಿ ಚರ್ಚಿಸಬಹುದು. ಈ ವಿಷಯವಾಗಿ ಪ್ರಧಾನಿ ಮೋದಿ ಅವರೊಂದಿಗೆ ಬೈಡನ್ ಈ ವಿಷಯ ಪ್ರಸ್ತಾಪ ಮಾಡಿ, ಸ್ಪಷ್ಟನೆ ಬಯಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಸುಲ್ಲಿವನ್ ತಿಳಿಸಿದ್ದಾರೆ.
ಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ನಿನ್ನೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿ7 ಶೃಂಗಸಭೆಗಾಗಿ ಪ್ರಧಾನಿ ಮೋದಿ ಗುರುವಾರ ಇಟಲಿಗೆ ಪ್ರಯಾಣಿಸಲಿದ್ದಾರೆ ಎಂದು ಖಚಿತ ಪಡಿಸಿದ್ದಾರೆ. ಸತತ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಮೋದಿ ಅವರ ಮೊದಲ ವಿದೇಶ ಪ್ರವಾಸ ಇದಾಗಿದೆ.