ಸಿನಿಮಾ ಎಂಬ ಬಣ್ಣದ ಲೋಕಕ್ಕೆ ಸ್ಟಾರ್ ಕಿಡ್ಸ್ ಬರೋದು ಹೊಸತೇನಲ್ಲ. ಜೊತೆಗೆ 'ನೆಪೋಟಿಸಂ' ಚರ್ಚೆ ಕೂಡ ನಿಲ್ಲಲ್ಲ. ಸ್ವಜನಪಕ್ಷಪಾತದ ಬಗ್ಗೆ ಹೆಚ್ಚು ದನಿ ಎತ್ತಿದವರು ಬಾಲಿವುಡ್ ಅಭಿನೇತ್ರಿ ಕಂಗನಾ ರಣಾವತ್. ತಮ್ಮ ಬೋಲ್ಡ್ ಹೇಳಿಕೆಗಳಿಂದಲೇ ಜನಮನದಲ್ಲಿ ಉಳಿದುಕೊಂಡಿದ್ದಾರೆ. ನಟಿಯ ದಿಟ್ಟತನಕ್ಕೆ ಮೆಚ್ಚುಗೆಯೂ ವ್ಯಕ್ತವಾಗುತ್ತದೆ. ಇದೀಗ ಇದೇ 'ನೆಪೋಟಿಸಂ' ಬಗ್ಗೆ ಕಂಗನಾ ಇನ್‌ಸ್ಟಾಗ್ರಾಮ್ ಸ್ಟೋರಿ ಶೇರ್ ಮಾಡಿದ್ದು, ನೆಟ್ಟಿಗರ ಗಮನ ಸೆಳೆದಿದೆ.
'ಸ್ವಜನಪಕ್ಷಪಾತ'ದ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಆರು ವರ್ಷಗಳ ನಂತರ "ತೃಪ್ತಿಕರ ಉತ್ತರ'' ಸಿಕ್ಕಿದೆ ಎಂದು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿನಲ್ಲಿ ನಟಿ ವಿವರಿಸಿದ್ದಾರೆ. 2017ರಲ್ಲಿ ಬಾಲಿವುಡ್ನ ಖ್ಯಾತ ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿಥ್ ಕರಣ್'ನ ಎಪಿಸೋಡ್ ಒಂದರ ನಂತರ ಈ ನೆಪೋಟಿಸಂ ಚರ್ಚೆ ಹುಟ್ಟಿಕೊಂಡಿತು. ಅತಿಥಿಯಾಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಂಗನಾ, ಕರಣ್ ಜೋಹರ್ ಅವರು ಸಿನಿಮಾ ರಂಗದಲ್ಲಿ 'ನೆಪೋಟಿಸಂ' ಅನ್ನು ಪ್ರಮೋಟ್ ಮಾಡುತ್ತಿದ್ದಾರೆಂದು ಆರೋಪಿಸಿದ್ದರು.
ಕರಣ್-ಕಂಗನಾ ಕೋಲ್ಡ್ ವಾರ್ ಮುಂದುವರಿದಿದೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ಅಲ್ಲದೇ, 2020ರಲ್ಲಿ ಬಾಲಿವುಡ್ನಲ್ಲಿ ಬೆಳೆಯುತ್ತಿದ್ದ ನಟ ಸುಶಾಂತ್ ಸಿಂಗ್ ರಜ್ಪೂತ್ ಅವರ ದುರಂತ ಸಾವಿನ ನಂತರ ಈ 'ನೆಪೋಟಿಸಂ' ಚರ್ಚೆ ವೇಗ ಪಡೆದುಕೊಂಡಿತು. ಸಮಯ ಕಳೆದರೂ, ಸ್ಟಾರ್ ಕಿಡ್ಸ್ಗೆ ಸುಲಭವಾಗಿ ಅವಕಾಶ ಸಿಕ್ಕಾಗ ಅಥವಾ ಈಗಾಗಲೇ ಗುರುತಿಸಿಕೊಂಡಿರುವ ಕಲಾವಿದರ ಸಿನಿಮಾಗಳು ಹಿನ್ನೆಡೆ ಕಂಡರೂ ಕೂಡ ಅವಕಾಶಗಳು ಸಿಕ್ಕಾಗ ಈ 'ನೆಪೋಟಿಸಂ' ಅನ್ನೋ ಚರ್ಚೆಯ ದನಿ ಏರುತ್ತದೆ.