ವಾಷಿಂಗ್ಟನ್ ಡಿಸಿ: ಹಾಲಿವುಡ್ ಖ್ಯಾತ ನಟ ಡಾನ್ ಮುರ್ರೆ ತಮ್ಮ 94ನೇ ವಯಸ್ಸಿನಲ್ಲಿ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಅವರ ನಿಧನ ಸುದ್ದಿಯನ್ನು ಅವರ ಮಗ ಕ್ರಿಸ್ಟೋಫರ್ ಶುಕ್ರವಾರ ಖಚಿತಪಡಿಸಿದ್ದಾರೆ. 'ಬಸ್ ಸ್ಟಾಪ್' ಮತ್ತು 'ನಾಟ್ಸ್ ಲ್ಯಾಂಡಿಂಗ್' ಚಿತ್ರಗಳಲ್ಲಿನ ಪಾತ್ರಗಳಿಗೆ ಅವರು ಹೆಸರಾಗಿದ್ದರು. ಅದ್ಭುತ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಗಿತ್ತು. ಇದಲ್ಲದೇ ಹಲವು ಪಾತ್ರಗಳಿಗೆ ಜೀವ ತುಂಬಿದ್ದು, ಅವರ ನಟನಾ ವೃತ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
31 ಜುಲೈ 1929ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಜನಿಸಿದ್ದ ಡೊನಾಲ್ಡ್ ಪ್ಯಾಟ್ರಿಕ್ ಮುರ್ರೆ, ಯೌವ್ವನಾವಸ್ಥೆಯಲ್ಲಿ ಬಣ್ಣದ ಜಗತ್ತಿಗೆ ಕಾಲಿಟ್ಟವರು. ತಮ್ಮದೇಯಾದ ನಟನಾ ಕೌಶಲ್ಯದಿಂದ ಹಾಲಿವುಡ್ ಚಿತ್ರರಂಗದಲ್ಲಿ ಗಮನ ಸೆಳೆದವರು. ವಿಲಿಯಂ ಇಂಗೆ ನಾಟಕದ ರೂಪಾಂತರವಾದ 'ಬಸ್ ಸ್ಟಾಪ್' ಚಿತ್ರದ ಅಭಿನಯಕ್ಕಾಗಿ ಮರ್ರಿ, ಆಸ್ಕರ್ ನಾಮನಿರ್ದೇಶನಕ್ಕೂ ಆಯ್ಕೆಯಾಗಿದ್ದರು. ಜೋಶುವಾ ಲೋಗನ್ ನಿರ್ದೇಶನದ ಈ ಚಿತ್ರದಲ್ಲಿ ಮರ್ಲಿನ್ ಮನ್ರೋ ಕೂಡ ನಟಿಸಿದ್ದಾರೆ. ಪ್ರೀತಿಯಲ್ಲಿ ಬೀಳುವ ಹುಡುಗನ ಪಾತ್ರಕ್ಕೆ ಮುರ್ರೆ ಬಣ್ಣ ಹಚ್ಚಿದ್ದಾರೆ. ಈ ಪಾತ್ರ ಅವರನ್ನು ಬಹು ಎತ್ತರಕ್ಕೆ ತಂದು ನಿಲ್ಲಿಸಿತ್ತು. ಬಳಿಕ ತಮ್ಮನ್ನು ಹುಡಿಕಿಕೊಂಡು ಬಂದ ಎಲ್ಲ ಪಾತ್ರಗಳಿಗೂ ಜೀವ ತುಂಬುವ ಮೂಲಕ ಹಾಲಿವುಡ್ನ ಟಾಪ್ ನಟರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅವರು ಸುಮಾರು ಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಪಾದ್ರಿ, ಮಾದಕ ವ್ಯಸನಿ, ಸಲಿಂಗಕಾಮಿ, ಸೆನೆಟರ್ ಸೇರಿದಂತೆ ಲೆಕ್ಕವಿಲ್ಲದಷ್ಟು ಪಾತ್ರಗಳನ್ನು ಇವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಚಲನಚಿತ್ರಗಳ ಹೊರತಾಗಿ ವೆಬ್ ಸರಣಿಗಳಲ್ಲಿಯೂ ಅವರು ಗಮನ ಸೆಳೆದ ನಟರಾಗಿದ್ದರು.
ದಿ ಸ್ಕಿನ್ ಆಫ್ ಅವರ್ ಟೀತ್ (1955), ಬ್ಯಾಚುಲರ್ ಪಾರ್ಟಿ (1957), ಎ ಹ್ಯಾಟ್‌ಫುಲ್ ಆಫ್ ರೈನ್ (1957), ಶೇಕ್ ಹ್ಯಾಂಡ್ಸ್ ವಿಥ್ ದಿ ಡೆವಿಲ್ (1959), ಒನ್ ಫೂಟ್ ಇನ್ ಹೆಲ್ (1960), ದಿ ಹೂಡ್ಲಮ್ ಪ್ರೀಸ್ಟ್ (1961), ಮತ್ತು ಅಡ್ವೈಸ್ ಅಂಡ್ ಕಾನ್ಸೆಂಟ್ (1957) ಇವರ ಪ್ರಮುಖ ಚಿತ್ರಗಳಾಗಿವೆ. 1951ರಲ್ಲಿ ತೆರೆಕಂಡ 'ದಿ ರೋಸ್ ಟ್ಯಾಟೂ' ಇವರ ಮೊದಲ ಚಿತ್ರವಾಗಿದೆ. ಚಿತ್ರರಂಗದಲ್ಲಿ ಅತ್ಯುನ್ನತ ಮಟ್ಟದಲ್ಲಿರುವಾಗಲೇ ವಿವಾಹಕ್ಕೂ ಕಾಲಿಟ್ಟರು.