"ಅಯ್ಯೋ.. ಇತ್ತೀಚೆಗೆ ಕೆಲಸ ಜಾಸ್ತಿ ಆಯ್ತು. ನಮ್ಮ ಮಕ್ಕಳು ಊಟ ಮಾಡಿ ಒಂದು ಲೋಟವನ್ನೂ ಎತ್ತಿಡುವುದಿಲ್ಲ. ಶಾಲೆಯಿಂದ ಬಂದು ಪುಸ್ತಕದ ಚೀಲವನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗ್ತಾರೆ. ಅವುಗಳನ್ನು ಜೋಡಿಸಿ ಇಡುವಷ್ಟರಲ್ಲಿ ಸಾಕುಬೇಕಾಗಿ ಹೋಗುತ್ತೆ ಅನ್ನೋದು ಪ್ರತಿಯೊಬ್ಬ ತಾಯಿಯ ದೂರಾಗಿದೆ.
“ನನ್ನ ಮಗಳು ಡಿಗ್ರಿ ಓದುತ್ತಿದ್ದಾಳೆ. ಮಗಳು ಬೆಳೆದು ಪದವಿಗೆ ಹೋಗುತ್ತಿದ್ದರೂ ಒಂದೇ ಒಂದು ಕೆಲಸ ಮಾಡುವುದಿಲ್ಲ. ಮನೆ ಗುಡಿಸುವುದು ಇರಲಿ ಕನಿಷ್ಠ ಗ್ಲಾಸಿನಿಂದ ಬಿದ್ದ ಅಕ್ಕಿಯ ಕಾಳುಗಳನ್ನೂ ಎತ್ತಿಕೊಳ್ಳುವುದಿಲ್ಲ. ಮಗನಿಗೆ ತಾನು ಹೊತ್ತು ಮಲಗಿದ್ದ ಬೆಡ್ಶೀಟ್ ಮಡಚಿಡುವುದು ಗೊತ್ತಿಲ್ಲ. ಕೊನೆಗೆ ಹಾಕಿದ ಲೈಟ್ ಅನ್ನೂ ಆಫ್ ಮಾಡುವುದಿಲ್ಲ, ಅದನ್ನೂ ನಾನೇ ಮಾಡಬೇಕು ಅಂತಾ ಅಳಲು ತೋಡಿಕೊಳ್ತಾರೆ ಇನ್ನೊಬ್ಬ ತಾಯಿ
ಪೋಷಕರಿಂದ ಇಂತಹ ಮಾತುಗಳನ್ನು ನಾವು ಆಗಾಗ್ಗೆ ಕೇಳುತ್ತೇವೆ. ಕೆಲವರು ಮಕ್ಕಳು ಕಷ್ಟ ಪಡಬಾರದು ಎಂದು ಹೇಳಿದರೆ ಇನ್ನು ಕೆಲವರು ನಿರಂತರವಾಗಿ ಓದಬೇಕು, ಓದಿ ಒಂದುತ್ತಮ ಜಾಬ್ ತೆಗೆದುಕೊಳ್ಳಲಿ ಎಂದು ಆಶಿಸುತ್ತಾರೆ. ಆದರೆ ನಿಜವಾದ ಅಧ್ಯಯನದ ಜೊತೆಗೆ ಮನೆಕೆಲಸವೂ ಮುಖ್ಯ ಎಂಬುದನ್ನು ಪ್ರತಿಯೊಬ್ಬ ಪೋಷಕರು ತಿಳಿಸಿಕೊಡಬೇಕಾದ ಅಗತ್ಯ ಇದೆ. ಆಗ ಮಕ್ಕಳ ಶಿಕ್ಷಣ ಮತ್ತು ಸ್ವಾವಲಂಬನೆ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಕನಿಷ್ಠ ರಜಾ ದಿನಗಳಲ್ಲಾದರೂ ಮೊಬೈಲ್ ಬದಿಗಿಟ್ಟು ಮನೆಗೆಲಸದಲ್ಲಿ ತಾಯಿಗೆ ನೆರವಾಗಬೇಕು ಎಂಬ ಭಾವನೆಯನ್ನು ಮಕ್ಕಳಲ್ಲಿ ಮೂಡಿಸುವುದು ಪೋಷಕರ ಜವಾಬ್ದಾರಿ ಆಗಿದೆ. ಕುಟುಂಬ ಸದಸ್ಯರು ಮಕ್ಕಳಿಗೆ ಸ್ವಾವಲಂಬನೆನ್ನು ಕಲಿಸಬೇಕಾದ ಅಗತ್ಯವಿದೆ.
ಪೋಷಕರಿಗೆ ತಜ್ಞರು ನೀಡುವ ಸಲಹೆಯೆಂದರೆ: ಮಕ್ಕಳ ಇಷ್ಟದಂತೆ ಬೆಳಸಿ, ಇನ್ನು ಪ್ರೀತಿಸುವುದು ತಪ್ಪಲ್ಲ. ಆದರೆ ಆ ಪ್ರೀತಿಯ ಭರದಲ್ಲಿ ಅವರನ್ನು ಸೋಮಾರಿಗಳನ್ನಾಗಿ ಮಾಡಿದರೆ ಅವರ ಜೀವನ ದುರ್ಬರವಾಗುತ್ತದೆ. ಬದಲಾಗಿ ಮಕ್ಕಳು ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳುವಂತೆ ಬೆಳೆಸುವುದು ಅತಿ ಮುಖ್ಯ. ತಮ್ಮ ಕೆಲಸವನ್ನು ತಾವು ಮಾಡಿಕೊಳ್ಳುವುದನ್ನು ಪೋಷಕರು ಆರಂಭಿಕ ಹಂತದಲ್ಲೇ ಮಾಡಿದಾಗ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಹೊಸ್ತಿಲನ್ನು ದಾಟಿದಾಗ ಹೊಸ ಜಗತ್ತಿಗೆ ಹೊಂದಿಕೊಳ್ಳಲು ಮತ್ತು ಗೊಂದಲಕ್ಕೆ ಬೀಳಲು ಸಾಧ್ಯವಿಲ್ಲ ಅಂತಾರೆ ತಜ್ಞರು.
ಬಾಲ್ಯದಲ್ಲಿಯೇ ಮನೆಕೆಲಸಗಳನ್ನು ಕಲಿಸಿದರೆ ಆರ್ಥಿಕ, ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು ಬೆಳೆಯುತ್ತವೆ ಎಂದು ಶಿಕ್ಷಣ ಇಲಾಖೆಯೂ ಸಹ ಸಲಹೆ ನೀಡುತ್ತದೆ. 3 ರಿಂದ 5 ನೇ ತರಗತಿಗಳಲ್ಲಿಯೇ ಮಕ್ಕಳಿಗೆ ಕೆಲಸ ಮತ್ತು ಶಿಕ್ಷಣದ ನಿಗದಿತ ವಿಷಯಗಳನ್ನು ಕಲಿಸಬೇಕಾಗುತ್ತದೆ. ರಜೆಯ ದಿನವಾದ ‘ಭಾನುವಾರ’ ಮಕ್ಕಳಿಗೆ ಇವುಗಳನ್ನು ಅಭ್ಯಾಸ ಮಾಡಲು ಪ್ರೋತ್ಸಾಹಿಸಬೇಕಾದ ಅಗತ್ಯವಿದೆ.
ಮಕ್ಕಳೊಂದಿಗೆ ಮನೆಗೆಲಸ ಹೀಗಿರಲಿ:
- ತೊಳೆದ ಮತ್ತು ಒಣಗಿಸಿದ ಬಟ್ಟೆಗಳನ್ನು ಮಡಚುವುದು ಮತ್ತು ವ್ಯವಸ್ಥಿತವಾಗಿಡುವುದು
- ನಿಯಮಿತವಾಗಿ ಶೂಗಳು ಮತ್ತು ಸ್ಯಾಂಡಲ್‌ಗಳನ್ನು ಸ್ವಚ್ಛಗೊಳಿಸಿ ಇಟ್ಟುಕೊಳ್ಳುವುದು
- ಉಪಭೋಗ್ಯ ವಸ್ತುಗಳು, ಬಟ್ಟೆ, ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸುವುದು
- ಗೃಹೋಪಯೋಗಿ ವಸ್ತುಗಳನ್ನು ತರಲು ಸಹಾಯ ಮಾಡುವುದು
- ನೀರು ತರಲು, ಮನೆ ಗುಡಿಸಲು, ಅಡುಗೆ ಮಾಡಲು ಸಹಾಯ ಮಾಡುವುದು
- ಗಿಡಗಳಿಗೆ ನೀರುಣಿಸುವುದು ಮತ್ತು ಗೊಬ್ಬರ ಹಾಕುವುದು
- ಊಟದ ಸಮಯದಲ್ಲಿ ಕುಡಿಯುವ ನೀರು ಮತ್ತು ಲೋಟಗಳನ್ನು ತೊಳೆಯುವುದು
- ಶೌಚಾಲಯಗಳನ್ನು ಬಳಸಿದ ನಂತರ ಅವುಗಳನ್ನು ಫ್ಲಶ್ ಮಾಡಬೇಕು ಮತ್ತು ಸ್ವಚ್ಛವಾಗಿಡುವಂತೆ ನೋಡಿಕೊಳ್ಳುವುದು.
ಇದನ್ನು ಓದಿ:ಸಿಇಟಿ: ಕಾಲೇಜಿಗೆ ವರದಿ ಮಾಡಿಕೊಳ್ಳದ 2,348 ಅಭ್ಯರ್ಥಿಗಳಿಗೆ ಕೆಇಎ ಷೋಕಾಸ್ ನೋಟಿಸ್