ಕೋಟಾ, ರಾಜಸ್ಥಾನ: ಜೆಇಇ ಮೇನ್ಸ್ -2025ರ ಪರೀಕ್ಷೆಯಲ್ಲಿ ಕೋಟಾ ಮೂಲದ ವಿದ್ಯಾರ್ಥಿ ಅರ್ನವ್ ಸಿಂಗ್ ಗಮನಾರ್ಹ ಸಾಧನೆ ಮಾಡಿದ್ದಾರೆ. ಜನವರಿಯಲ್ಲಿ ಪ್ರಕಟವಾದ ಜಂಟಿ ಪ್ರವೇಶ ಪರೀಕ್ಷೆಯಲ್ಲಿ 100ಕ್ಕೆ 100 ಅಂಕ ಗಳಿಸುವ ಮೂಲಕ ಮೇರು ಸಾಧನೆ ಮಾಡಿದ್ದಾರೆ. ತಮ್ಮ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿರುವ ಅರ್ನವ್, ತಮ್ಮ ಅಧ್ಯಯನದ ಸಿದ್ಧತೆ ಮತ್ತು ತಂದೆಯ ಬೆಂಬಲದಿಂದ ಈ ಸಾಧನೆ ಮಾಡಲು ಸಹಾಯ ಮಾಡಿತು ಎಂದಿದ್ದಾರೆ.
ಈಟಿವಿ ಭಾರತ್ ಸಂದರ್ಶನದಲ್ಲಿ ಮಾತನಾಡಿದ ಅರ್ನವ್ ತಂದೆ ಅಜಿತ್ ಸಿಂಗ್, ತಮ್ಮ ಮಗನಿಗೆ ತಾವು ಇಂತಹದ್ದೇ ಫಲಿತಾಂಶ ಬರಬೇಕು ಎಂದು ಒತ್ತಡ ಹಾಕಲಿಲ್ಲ. ಆದರೆ, ಸರಿಯಾದ ರೀತಿಯಲ್ಲಿ ಸಿದ್ಧತೆ ನಡೆಸುವಂತೆ ಸಲಹೆ ನೀಡಿದೆ. ಆತ ಶೇ 100ರಷ್ಟು ಅಂಕ ಪಡೆದವರ ಕ್ಲಬ್ ಸೇರದಿದ್ದರೂ ನಾನು ದುಃಖಿಸುತ್ತಿರಲಿಲ್ಲ. ಕಾರಣ ಅರ್ನವ್ ಫಲಿತಾಂಶದ ಚಿಂತೆಬಿಟ್ಟು ಉತ್ತಮ ಓದಿನ ಕಡೆ ಗಮನ ಹರಿಸಿದ್ದ. ಯಾವುದೇ ಒತ್ತಡ ಇಲ್ಲದೇ ವಿಷಯವನ್ನು ಮನನ ಮಾಡಿಕೊಳ್ಳುವತ್ತ ಚಿತ್ತ ಹರಿಸಿದ್ದ ಎಂದು ತಿಳಿಸಿದ್ದಾರೆ.
ಅಜಿತ್ ಸಿಂಗ್ ಕೂಡ ಖಾಸಗಿ ಸಂಸ್ಥೆಯಲ್ಲಿ ಗಣಿತ ತರಬೇತುದಾರರಾಗಿದ್ದಾರೆ. ಮೂಲತಃ ಬಿಹಾರದವರಾಗಿರುವ ಅರ್ನವ್ ಹುಟ್ಟಿ ಬೆಳೆದಿದ್ದು, ಪಶ್ಚಿಮ ಬಂಗಾಳದ ದುರ್ಗಪುರದಲ್ಲಿ. ಆ ಬಳಿಕ ಅವರು ಮಹಾರಾಷ್ಟ್ರದ ನಾಗ್ಪುರ್ಗೆ ಸ್ಥಳಾಂತರಗೊಂಡರು. ಬಳಿಕ ಇವರು ಭೋಪಾಲ್ನಲ್ಲಿ ನೆಲೆಸಿದ್ದರು. 2019ರಿಂದ ಅರ್ನವ್ ಕೋಟಾದಲ್ಲಿ ಕಲಿಕೆ ಆರಂಭಿಸಿದ್ದು, ಅವರ ತಂದೆ 2019 ರಿಂದ ಶಿಕ್ಷಣ ವೃತ್ತಿಯಲ್ಲಿ ತೊಡಗಿದ್ದಾರೆ. ತಾಯಿ ನೇಹಾ ಭಾರತಿ ಗೃಹಿಣಿಯಾಗಿದ್ದಾರೆ.
10ನೇ ತರಗತಿಯಿಂದಲೇ ಐಐಟಿ ಕನಸು: ಅರ್ನವ್ ಯಶಸ್ಸಿನಗಾಥೆ 10ನೇ ತರಗತಿಯಿಂದಲೇ ಶುರುವಾಗಿದೆ. ಆತ ಆಗಿನಿಂದಲೇ, ಅಂದರೆ ಭೋಪಾಲ್ನಲ್ಲಿರುವಾಗಲೇ ಐಐಟಿ ಪ್ರವೇಶ ಪರೀಕ್ಷೆಗೆ ತಯಾರಿ ಆರಂಭಿಸಿದ್ದೆ. ಕೋಟಾಗೆ ಬಂದ ಬಳಿಕ ನಾನು ನನ್ನ ಶಾಲಾ ಮತ್ತು ಕೋಚಿಂಗ್ ಎರಡನ್ನು ಸರಿದೂಗಿಸಿಕೊಂಡು ಹೋಗಲು ಮುಂದಾದೆ. ಕೋಟಾದ ಕೋಚಿಂಗ್ ವೇಳೆ ಜೆಇಇ ಮತ್ತು ಬೋರ್ಡ್ ಪರೀಕ್ಷೆ ಎರಡಕ್ಕೂ ಸಮಯವನ್ನು ಮಾಡಿಕೊಂಡು ಅಭ್ಯಾಸ ಮಾಡಿದೆ ಎನ್ನುತ್ತಾರೆ ಅರ್ನವ್.
ಮಕ್ಕಳ ಕಡೆಯಿಂದ ಅಧಿಕ ನಿರೀಕ್ಷೆ ಹೊಂದುವುದು ತಪ್ಪು. ಇದರ ಬದಲಾಗಿ ಅವರು ವ್ಯವಸ್ಥಿತವಾಗಿ ತಯಾರಿ ಮಾಡಿಕೊಳ್ಳುವುದರತ್ತ ಗಮನ ಕೇಂದ್ರೀಕರಿಸಬೇಕು. ಸಿದ್ಧತೆ ಸರಿಯಾಗಿದ್ದಲಿ ಮಾತ್ರವೇ ಯಶಸ್ಸು ಸಿಗುತ್ತದೆ . ಸಿದ್ಧತೆ ಸಮಯದಲ್ಲಿ ಮಕ್ಕಳನ್ನು ಶಾಂತವಾಗಿ, ಅವರ ಮನಸ್ಥಿತಿ ಏಕಾಗ್ರತೆಯಿಂದ ಇರುವಂತೆ ನೋಡಿಕೊಳ್ಳಿ. ಬದಲಾಗಿ ಉತ್ತಮ ಫಲಿತಾಂಶ ಬರಬೇಕು ಎಂದು ನಿರೀಕ್ಷೆ ಮಾಡುವುದರಿಂದ ಅದು ಅವರ ಸಿದ್ಧತೆಗೆ ಅಡ್ಡಿಯಾಗುತ್ತದೆ. ಶೈಕ್ಷಣಿಕ ಗುರಿಗಳ ಸಾಧನೆಗೆ ಆರೋಗ್ಯಯುತ ಮತ್ತು ಉತ್ತಮ ವ್ಯಕ್ತಿತ್ವವೂ ಪ್ರಮುಖವಾಗಿದೆ ಎನ್ನುವುದು ಅರ್ನವ್ ಅವರ ಅನಿಸಿಕೆ ಆಗಿದೆ.