ನವದೆಹಲಿ: ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ 240 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ತಮ್ಮ ಮೊಮ್ಮಗನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಮೂಲಕ ನಾರಾಯಣಮೂರ್ತಿ ಅವರ 4 ತಿಂಗಳ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿ ಭಾರತದ ಅತ್ಯಂತ ಕಿರಿಯ ಮಿಲಿಯನೇರ್ ಆಗುವ ಸಾಧ್ಯತೆ ಇದೆ. ತಾತನ ಉಡುಗೊರೆಯಿಂದ ಏಕಾಗ್ರಹ ಮೂರ್ತಿ ಇನ್ಫೋಸಿಸ್ನಲ್ಲಿ 15 ಲಕ್ಷ ಷೇರುಗಳನ್ನು ಅಥವಾ ಶೇಕಡಾ 0.04 ರಷ್ಟು ಪಾಲು ಪಡೆದುಕೊಂಡಿದ್ದಾರೆ.
77 ವರ್ಷದ ಇನ್ಫೋಸಿಸ್ ಸಂಸ್ಥಾಪಕ ಮೂರ್ತಿ ಆಫ್ - ಮಾರ್ಕೆಟ್ ವಹಿವಾಟಿನಲ್ಲಿ ತಮ್ಮ ಮೊಮ್ಮಗನಿಗೆ ಷೇರುಗಳನ್ನು ಉಡುಗೊರೆಯಾಗಿ ನೀಡಿದರು. ಇದರೊಂದಿಗೆ, ಐಟಿ ವಿಭಾಗದಲ್ಲಿ ನಾರಾಯಣ ಮೂರ್ತಿ ಅವರ ಷೇರುಗಳ ಪಾಲು ಶೇಕಡಾ 0.36ಕ್ಕೆ ಅಥವಾ 1.51 ಕೋಟಿ ಷೇರುಗಳಿಗೆ ಇಳಿಕೆಯಾಗಿದೆ.
ಏಕಾಗ್ರಹ ಎಂಬ ಸಂಸ್ಕೃತ ಪದದ ಅರ್ಥ ಅಚಲವಾದ ಏಕಾಗ್ರತೆ ಮತ್ತು ದೃಢನಿಶ್ಚಯ ಎಂದಾಗಿದೆ. ಮಹಾಭಾರತದಲ್ಲಿ ಅರ್ಜುನನ ಮತ್ತೊಂದು ಹೆಸರು ಏಕಾಗ್ರಹವಾಗಿದೆ. ಈ ಹೆಸರು ಭಗವದ್ಗೀತೆಯ ಆರನೇ ಅಧ್ಯಾಯದಲ್ಲಿಯೂ ಕಂಡು ಬರುತ್ತದೆ. ಇದು ಯೋಗ ಮತ್ತು ಧ್ಯಾನವನ್ನು ಆತ್ಮಸಾಕ್ಷಾತ್ಕಾರದ ಸಾಧನ ಎಂದು ಸೂಚಿಸುತ್ತದೆ.
ಸೋಮವಾರ ಪ್ರತಿ ಷೇರಿಗೆ 1,620 ರೂ.ಗಳ ದರದಲ್ಲಿ, ಏಕಾಗ್ರಹ ಮೂರ್ತಿ 243 ಕೋಟಿ ರೂ. ಮೌಲ್ಯದ ಷೇರುಗಳನ್ನು ಪಡೆದರು. ನಾರಾಯಣ ಮೂರ್ತಿ ಮತ್ತು ಅವರ ಪತ್ನಿ ಮತ್ತು ಈಗ ರಾಜ್ಯಸಭಾ ಸಂಸದೆಯಾಗಿರುವ ಸುಧಾ ಮೂರ್ತಿ ಕಳೆದ ವರ್ಷ ನವೆಂಬರ್ ನಲ್ಲಿ ಮಗ ರೋಹನ್ ಮೂರ್ತಿ ಮತ್ತು ಆತನ ಪತ್ನಿ ಅಪರ್ಣಾ ಕೃಷ್ಣನ್ ಅವರಿಗೆ ಗಂಡು ಮಗು ಜನಿಸಿದ ನಂತರ ಅಜ್ಜ - ಅಜ್ಜಿಯಾಗಿದ್ದರು.
ಎಂಜಿನಿಯರ್ ಆಗಿ ಸಮಾಜ ಸೇವಕಿ ಮತ್ತು ಲೇಖಕಿಯಾಗಿ ಗುರುತಿಸಿಕೊಂಡಿರುವ ಸುಧಾ ಮೂರ್ತಿ ಕಳೆದ ವಾರ ತಮ್ಮ ಪತಿಯ ಸಮ್ಮುಖದಲ್ಲಿ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.
ಏಕಾಗ್ರಹ ಮೂರ್ತಿ ನಾರಾಯಣ ಮೂರ್ತಿ ಮತ್ತು ಸುಧಾ ದಂಪತಿಯ ಮೂರನೇ ಮೊಮ್ಮಗುವಾಗಿದೆ. ಅಕ್ಷತಾ ಮೂರ್ತಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. 1981 ರಲ್ಲಿ 10 ಸಾವಿರ ರೂಪಾಯಿಗಳ ಸಾಧಾರಣ ಹೂಡಿಕೆಯೊಂದಿಗೆ ಪ್ರಾರಂಭವಾದ ಇನ್ಫೋಸಿಸ್ ಭಾರತದ 2 ನೇ ಅತಿದೊಡ್ಡ ಟೆಕ್ ಕಂಪನಿಯಾಗಿ ಬೆಳೆದಿದೆ. ಕಂಪನಿಯ ಸ್ಥಾಪನೆಗೆ ಸುಧಾ ಮೂರ್ತಿ ಪತಿಗೆ ತಮ್ಮಲ್ಲಿದ್ದ 10 ಸಾವಿರ ರೂಪಾಯಿ ನೀಡಿದ್ದರು.
ಇದನ್ನೂ ಓದಿ : 2025ರಲ್ಲಿ ಭಾರತದ ಐಟಿ ವಲಯದ ಆದಾಯ ಶೇ 3 ರಿಂದ 5ರಷ್ಟು ಬೆಳವಣಿಗೆ: ಐಸಿಆರ್ಎ ವರದಿ