ಈಕ್ವಿಟಿಗಳ ಮೇಲಿನ ದೀರ್ಘಾವಧಿ ಬಂಡವಾಳ ಲಾಭ (ಎಲ್ ಟಿಸಿಜಿ) ತೆರಿಗೆಯನ್ನು ಹಿಂದಿನ ಶೇಕಡಾ 10 ರಿಂದ ಶೇ 12.5 ಕ್ಕೆ ಹೆಚ್ಚಿಸಿರುವುದು ಮತ್ತು ಅಲ್ಪಾವಧಿಯ ಬಂಡವಾಳ ಲಾಭ (ಎಸ್ ಟಿಸಿಜಿ) ತೆರಿಗೆಯನ್ನು ಶೇಕಡಾ 15 ರಿಂದ ಶೇಕಡಾ 20ಕ್ಕೆ ಹೆಚ್ಚಿಸಿರುವುದನ್ನು ಬಜೆಟ್ನಲ್ಲಿ ಘೋಷಿಸಿದ ನಂತರ ಮುಂಬೈ ಷೇರು ಪೇಟೆ ಇಂದು ತೀವ್ರ ಕುಸಿತ ಕಂಡಿದೆ. ಆದಾಗ್ಯೂ ಎಲ್ಟಿಸಿಜಿ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರೂ.ಗಳಿಂದ 1.25 ಲಕ್ಷ ರೂ.ಗೆ ಹೆಚ್ಚಿಸಿರುವುದು ಗಮನಾರ್ಹ.
ಎರಡೂ ಪ್ರಮುಖ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗಮನಾರ್ಹ ನಷ್ಟವನ್ನು ಅನುಭವಿಸಿದ್ದು, ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ. ಎಫ್ &ಒ ಮೇಲೆ ಹೆಚ್ಚಿನ ತೆರಿಗೆಗಳನ್ನು ನಿರೀಕ್ಷಿಸಲಾಗಿದೆ ಮತ್ತು ಮಾರುಕಟ್ಟೆಯಲ್ಲಿ ಅತಿಯಾದ ಊಹಾತ್ಮಕ ವಹಿವಾಟುಗಳನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಮಾರುಕಟ್ಟೆಯ ಚಂಚಲತೆಯು ಅಲ್ಪಾವಧಿಗೆ ಮುಂದುವರಿಯಬಹುದು ಎಂದು ತಜ್ಞರು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಕಾರ್ಯನಿರ್ವಾಹಕ ನಿರ್ದೇಶಕ ಸತೀಶ್ ಮೆನನ್, ಮಧ್ಯಂತರ ಬಜೆಟ್ನಲ್ಲಿ ಘೋಷಿಸಲಾಗಿದ್ದ ಪ್ರಗತಿಪರ ಕ್ರಮಗಳನ್ನು ಆಧರಿಸಿ ಈ ಬಜೆಟ್ ತಯಾರಾಗುವ ನಿರೀಕ್ಷೆಯಿದೆ. ಆದಾಗ್ಯೂ, ಒಟ್ಟಾರೆ ಸರ್ಕಾರದ ವೆಚ್ಚವನ್ನು ಮಧ್ಯಂತರ ಬಜೆಟ್ನ ಗುರಿಯೊಂದಿಗೆ ಹೊಂದಿಕೆ ಮಾಡುವುದು ಮತ್ತು ವಿತ್ತೀಯ ಕೊರತೆಯನ್ನು ಶೇ 4.9ಕ್ಕೆ ಇಳಿಸುವುದು ಮುಖ್ಯ ಗುರಿಯಾಗಿದೆ. ಇದು ಹಣಕಾಸು ವರ್ಷ 2024 ರಲ್ಲಿ ಅಂದಾಜಿಸಲಾದ ಶೇ 5.6 ಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಉದ್ಯೋಗ ಸೃಷ್ಟಿ, ಕಾರ್ಯಪಡೆ, ಕೌಶಲ್ಯ ಅಭಿವೃದ್ಧಿ, ಕೃಷಿಯಲ್ಲಿ ಸುಧಾರಣೆಗಳು, ನಗರ ಮತ್ತು ಗ್ರಾಮೀಣ ವಸತಿ ಮತ್ತು ಎಂಎಸ್ಎಂಇ ವಲಯಕ್ಕೆ ಹೆಚ್ಚಿನ ಧನಸಹಾಯವನ್ನು ಗುರಿಯಾಗಿಟ್ಟುಕೊಂಡಿರುವ ಹೊಸ ಸ್ಥೂಲ ಉಪಕ್ರಮಗಳು ಸಕಾರಾತ್ಮಕವಾಗಿವೆ ಎಂದು ಹೇಳಿದರು.
"ಬಂಡವಾಳ ಲಾಭ ತೆರಿಗೆ ಹೆಚ್ಚಳವನ್ನು ನಿರೀಕ್ಷಿಸಿರಲಿಲ್ಲ. ಎಸ್ಟಿಸಿಜಿಯಲ್ಲಿ ಶೇಕಡಾ 5ರಷ್ಟು ಹೆಚ್ಚಳವು ಮುಂದಿನ ದಿನಗಳಲ್ಲಿ ಅಲ್ಪಾವಧಿಯ ಹೂಡಿಕೆದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ" ಎಂದು ಮೆನನ್ ಹೇಳಿದರು.
ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್ನ ಹೂಡಿಕೆ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ವಿ.ಕೆ.ವಿಜಯಕುಮಾರ್ ಮಾತನಾಡಿ, "ಹಣಕಾಸಿನ ಬಲವರ್ಧನೆ ಮತ್ತು ಉದ್ಯೋಗ ಸೃಷ್ಟಿಯು ಈ ಬಜೆಟ್ನ ಪ್ರಮುಖ ಗುರಿಗಳಾಗಿವೆ. 2025ರ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯ ಗುರಿಯನ್ನು ಮಧ್ಯಂತರ ಬಜೆಟ್ನಲ್ಲಿ ಶೇ 5.1ರಿಂದ ಶೇ 4.9ಕ್ಕೆ ಇಳಿಸಿರುವುದು ಈಗ ಆರ್ಥಿಕ ಸ್ಥಿರತೆಯೊಂದಿಗೆ ಬೆಳವಣಿಗೆಯ ಮೇಲೆ ಸರ್ಕಾರದ ಗಮನವನ್ನು ಪ್ರತಿಬಿಂಬಿಸುತ್ತದೆ. ಇದು, ಹಣಕಾಸು ವರ್ಷ 2025 ರಲ್ಲಿ 11.11 ಲಕ್ಷ ಕೋಟಿ ರೂ.ಗಳ (ಜಿಡಿಪಿಯ ಶೇ 3.4ರಷ್ಟು) ಬಂಡವಾಳದೊಂದಿಗೆ ದೀರ್ಘಾವಧಿಯಲ್ಲಿ ಆರ್ಥಿಕತೆಯ ಬೆಳವಣಿಗೆಗೆ ಉತ್ತಮವಾಗಿದೆ ಎಂದು ತಿಳಿಸಿದರು.
ಮಾರುಕಟ್ಟೆ ದೃಷ್ಟಿಕೋನದಿಂದ ಬಂಡವಾಳ ಲಾಭದ ಮೇಲೆ ತೆರಿಗೆ ಆದಾಯವನ್ನು ಹೆಚ್ಚಿಸುವ ಉದ್ದೇಶದ ಬಜೆಟ್ ಪ್ರಸ್ತಾಪಗಳು ಸ್ವಲ್ಪ ನಕಾರಾತ್ಮಕವಾಗಿವೆ. ಎಸ್ಟಿಸಿಜಿ ತೆರಿಗೆಯನ್ನು ಶೇ 15ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ. ವಿಶೇಷವಾಗಿ ಎಲ್ಟಿಸಿಜಿ ತೆರಿಗೆ ವಿನಾಯಿತಿ ಮಿತಿಯನ್ನು 1 ಲಕ್ಷ ರೂ.ಗಳಿಂದ 1.25 ಲಕ್ಷ ರೂ.ಗೆ ಹೆಚ್ಚಿಸುವ ದೃಷ್ಟಿಕೋನದಿಂದ ನೋಡಿದಾಗ ಎಲ್ಟಿಸಿಜಿ ತೆರಿಗೆಯನ್ನು ಶೇ 10 ರಿಂದ ಶೇ 12.5ಕ್ಕೆ ಹೆಚ್ಚಿಸಿರುವುದು ಅತ್ಯಲ್ಪವಾಗಿದೆ. ಎಫ್ &ಒ ಮೇಲೆ ಹೆಚ್ಚಿನ ತೆರಿಗೆಗಳನ್ನು ನಿರೀಕ್ಷಿಸಲಾಗಿತ್ತು ಮತ್ತು ಮಾರುಕಟ್ಟೆಯಲ್ಲಿ ಅತಿಯಾದ ಊಹಾತ್ಮಕ ವಹಿವಾಟುಗಳನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಆಲ್ಕೆಮಿ ಕ್ಯಾಪಿಟಲ್ ಮ್ಯಾನೇಜ್ಮೆಂಟ್ನ ಕ್ವಾಂಟ್ & ಫಂಡ್ ಮ್ಯಾನೇಜರ್ನ ಮುಖ್ಯಸ್ಥ ಅಲೋಕ್ ಅಗರ್ವಾಲ್ ಮಾತನಾಡಿ, ಬಂಡವಾಳ ಲಾಭದ ತೆರಿಗೆ ದರಗಳ ಹೆಚ್ಚಳವು ಮಾರುಕಟ್ಟೆಯಲ್ಲಿ ನಡುಕವನ್ನು ಉಂಟುಮಾಡಿದೆ. ವಿಶೇಷವಾಗಿ ತೆರಿಗೆ ಆದಾಯದ ಆವೇಗವು ಉತ್ತಮವಾಗಿದೆ. ಈ ಅನಿರೀಕ್ಷಿತ ನೀತಿ ಬದಲಾವಣೆಯು ಅಲ್ಪಾವಧಿಯಲ್ಲಿ ಹೂಡಿಕೆದಾರರ ಭಾವನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ಇತ್ತೀಚಿನ ದಿನಗಳಲ್ಲಿ ಕಂಡುಬರುವುದಕ್ಕಿಂತ ಹೆಚ್ಚಿನ ಮಾರುಕಟ್ಟೆ ಚಂಚಲತೆಗೆ ಕಾರಣವಾಗುತ್ತದೆ. ಹೂಡಿಕೆದಾರರು ತಮ್ಮ ಪೋರ್ಟ್ಫೋಲಿಯೊಗಳ ಮೂಲಭೂತ ಸಾಮರ್ಥ್ಯಗಳ ಮೇಲೆ ಕೇಂದ್ರೀಕರಿಸಬೇಕು. ಅಂತಹ ಅಲ್ಪಾವಧಿಯ ಮಾರುಕಟ್ಟೆ ಏರಿಳಿತಗಳು ತಮ್ಮ ಪೋರ್ಟ್ಫೋಲಿಯೊಗೆ ಬಲವಾದ ಷೇರುಗಳನ್ನು ಸೇರಿಸಲು ಅವಕಾಶಗಳನ್ನು ನೀಡಬಹುದು ಎಂದರು.
ಇದನ್ನೂ ಓದಿ : ಕೇಂದ್ರ ಬಜೆಟ್ 2024: ಯಾವ ವಸ್ತು ಏರಿಕೆ, ಯಾವುದು ಇಳಿಕೆ- ತಿಳಿಯಿರಿ - Union Budget 2024