ನವದೆಹಲಿ: ಓದಲು ಅಥವಾ ನೋಡಲು ಆಗದಷ್ಟು ಮಿತಿಮೀರಿದ ಮಾಹಿತಿ ಕಾಣಿಸುವುದರಿಂದ ಹಾಗೂ ಪದೇ ಪದೆ ಜಾಹೀರಾತುಗಳು ಕಾಣಿಸಿಕೊಳ್ಳುವ ಕಾರಣದಿಂದ ಶೇ 88ರಷ್ಟು ಭಾರತೀಯ ಗ್ರಾಹಕರು ಆನ್‌ಲೈನ್ ಶಾಪಿಂಗ್ ತ್ಯಜಿಸಿದ್ದಾರೆ ಎಂದು ಹೊಸ ವರದಿಯೊಂದು ಸೋಮವಾರ ತಿಳಿಸಿದೆ.
ಆನ್‌ಲೈನ್ ಶಾಪಿಂಗ್ನ ರೀತಿಯಲ್ಲಿ ಯಾವುದೇ ಸುಧಾರಣೆ ಆಗುತ್ತಿಲ್ಲ. ಅಲ್ಲದೆ ಆನ್ಲೈನ್ನಲ್ಲಿ ಯಾವುದಾದರೂ ವಸ್ತುಗಳನ್ನು ಖರೀದಿಸುವ ನಿರ್ಧಾರ ಕೈಗೊಳ್ಳುವ ಸಮಯ ಮತ್ತು ಶ್ರಮ ಎರಡೂ ಹೆಚ್ಚಾಗುತ್ತಿವೆ ಎಂಬುದು ಶೇ 67ರಷ್ಟು ಭಾರತೀಯ ಗ್ರಾಹಕರ ಅಭಿಪ್ರಾಯ ಎಂದು ಜಾಗತಿಕ ಐಟಿ ಸೇವಾ ಸಂಸ್ಥೆ ಅಕ್ಸೆಂಚರ್‌ನ ವರದಿ ಹೇಳಿದೆ. ಭಾರತ ಸೇರಿದಂತೆ 12 ದೇಶಗಳ 19,000 ಗ್ರಾಹಕರನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿದೆ.
"ಗ್ರಾಹಕ ಕೇಂದ್ರೀಕೃತ ಕಂಪನಿಗಳು ಉತ್ಪನ್ನಗಳು ಮತ್ತು ಸೇವೆಗಳನ್ನು ಹೇಗೆ ಬ್ರ್ಯಾಂಡ್ ಮಾಡಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ ಎಂಬುದನ್ನು ಮರುಪರಿಶೀಲಿಸಬೇಕಾಗಿದೆ. ಗ್ರಾಹಕರು ವಿಪರೀತ ಮಾಹಿತಿಯ ಹೊರೆಯನ್ನು ದಾಟಿ ಸುಲಭವಾಗಿ ಹಾಗೂ ಆತ್ಮವಿಶ್ವಾಸದಿಂದ ಖರೀದಿ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾರಾಟ ಮತ್ತು ಬ್ರ್ಯಾಂಡಿಂಗ್ ವಿಧಾನಗಳನ್ನು ಬದಲಿಸಬೇಕಿದೆ" ಎಂದು ಅಕ್ಸೆಂಚರ್ ಇನ್ ಇಂಡಿಯಾದ ಸ್ಟ್ರಾಟಜಿ & ಕನ್ಸಲ್ಟಿಂಗ್ ಎಂಡಿ ಮತ್ತು ಮುಖ್ಯಸ್ಥ ವಿನೀತ್ ಆರ್.ಅಹುಜಾ ಹೇಳಿದರು.
ಇದಲ್ಲದೆ ಜನರೇಟಿವ್ ಎಐ, ಇತರ ತಂತ್ರಜ್ಞಾನಗಳು ಮತ್ತು ಹೊಸ ಕೆಲಸದ ವಿಧಾನಗಳ ಮೂಲಕ ಗ್ರಾಹಕರ ಸಬಲೀಕರಣವು ಬ್ರ್ಯಾಂಡ್ಗಳ ಬಗ್ಗೆ ಜನರ ಯೋಚನೆಯನ್ನು ಬದಲಾಯಿಸುತ್ತದೆ ಎಂದು ವರದಿ ಹೇಳಿದೆ.