ಮಹಾಕುಂಭ ನಗರ: ಧಾರ್ಮಿಕ ದೇಣಿಗೆಗಳನ್ನು ನೀಡುವ ವಿಷಯದಲ್ಲಿ ಎಲ್ಲಾ ಧರ್ಮಗಳಿಗೂ ಅನ್ವಯವಾಗುವಂತೆ ಏಕರೂಪದ ಕಾನೂನನ್ನು ಜಾರಿಗೆ ತರುವಂತೆ ವಿಶ್ವ ಹಿಂದೂ ಪರಿಷತ್ ನ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಭಾನುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ನ ಮೂರು ದಿನಗಳ ಸಭೆಯ ನಂತರ ಮಾತನಾಡಿದ ಕುಮಾರ್, ಧಾರ್ಮಿಕ ದೇಣಿಗೆಗಳಿಗೆ ಪ್ರತ್ಯೇಕ ಕಾನೂನುಗಳ ಅಸ್ತಿತ್ವವನ್ನು ಪ್ರಶ್ನಿಸಿದರು.
"ಮುಸ್ಲಿಮರು ಅಲ್ಲಾಹುವಿಗೆ ಭೂಮಿಯನ್ನು ದಾನ ಮಾಡಿದಾಗ, ಅದು ವಕ್ಫ್ ಆಸ್ತಿಯಾಗುತ್ತದೆ. ಆದರೆ ಹಿಂದೂಗಳು ದೇವಾಲಯಗಳಿಗೆ, ಕ್ರಿಶ್ಚಿಯನ್ನರು ಚರ್ಚುಗಳಿಗೆ ಅಥವಾ ಸಿಖ್ಖರು ಗುರುದ್ವಾರಗಳಿಗೆ ದೇಣಿಗೆ ನೀಡಿದಾಗ ಅದೆಲ್ಲಿ ಹೋಗುತ್ತದೆ? ವಿಭಿನ್ನ ಧರ್ಮಗಳಿಗೆ ವಿಭಿನ್ನ ಕಾನೂನುಗಳು ಏಕೆ?" ಎಂದು ಅವರು ಪ್ರಶ್ನಿಸಿದರು.
1954 ರ ವಕ್ಫ್ ಕಾಯ್ದೆಯನ್ನು ಉಲ್ಲೇಖಿಸಿದ ಅವರು, ಇಬ್ಬರು ಕಾಂಗ್ರೆಸ್ ರಾಜ್ಯಸಭಾ ಸದಸ್ಯರು ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಇರುವ ಬಗ್ಗೆ ಆಗಿನ ಕಾನೂನು ಸಚಿವರನ್ನು ಪ್ರಶ್ನಿಸಿದ್ದರು ಎಂಬುದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
"ಎಲ್ಲರಿಗೂ ಸಾಮಾನ್ಯ ಕಾನೂನು ಜಾರಿಗೊಳಿಸುವ ಬಗ್ಗೆ ಪರಿಗಣಿಸುವುದಾಗಿ ಆಗ ಸಚಿವರು ಹೇಳಿದ್ದರು. ಈಗ ಸರ್ಕಾರವು ಅಂತಹ ಕಾನೂನನ್ನು ಜಾರಿಗೆ ತರುವ ಸಮಯ ಬಂದಿದೆ" ಎಂದು ಕುಮಾರ್ ಹೇಳಿದರು.
ಕಾಶಿ ಮತ್ತು ಮಥುರಾದಲ್ಲಿನ ದೇವಾಲಯಗಳನ್ನು ಮರಳಿ ಪಡೆಯುವ ವಿಷಯದ ಬಗ್ಗೆ ಮಾತನಾಡಿದ ವಿಎಚ್ಪಿ ಮುಖಂಡ ಅಲೋಕ್ ಕುಮಾರ್, "ಈ ದೇವಾಲಯಗಳನ್ನು ಮರಳಿ ಪಡೆಯಲು ನಾವು ಎಲ್ಲಾ ರೀತಿಯ ಸಾಂವಿಧಾನಿಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನಾವು ಹಿಂದೂ ಸಮುದಾಯಕ್ಕೆ ಭರವಸೆ ನೀಡಿದ್ದೇವೆ" ಎಂದು ಹೇಳಿದರು.