ನವದೆಹಲಿ: ದೇಶದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಮಹತ್ವದ ಪರಿವರ್ತನೆಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಯೋಜಿಸಿದೆ. ವಿದೇಶಿ ವಿಶ್ವವಿದ್ಯಾಲಯಗಳ ಮಾದರಿಯಲ್ಲೇ ಈಗ ದೇಶದ ವಿಶ್ವವಿದ್ಯಾಲಯಗಳು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ವರ್ಷಕ್ಕೆರಡು ಬಾರಿ ಪ್ರವೇಶಾತಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ಯುಜಿಸಿ ಅಧ್ಯಕ್ಷ ಜಗದೇಶ್ ಕುಮಾರ್ ತಿಳಿಸಿದ್ದಾರೆ.
ಭಾರತೀಯ ವಿಶ್ವವಿದ್ಯಾಲಯಗಳೂ ಸೇರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಸ್ತುತ ವಾರ್ಷಿಕವಾಗಿ ಒಮ್ಮೆ ಮಾತ್ರ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಸಾಧ್ಯವಿದೆ. ಆದರೆ ಇನ್ಮುಂದೆ ವರ್ಷಕ್ಕೆ ಎರಡು ಬಾರಿ ಪ್ರವೇಶಾತಿ ನೀಡುವ ಯೋಜನೆ ಜಾರಿಗೆ ಬರುತ್ತಿದ್ದು, ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ.2024-25ನೇ ಶೈಕ್ಷಣಿಕ ಸಾಲಿನಲ್ಲಿ ಹೊಸ ನೀತಿ ಜಾರಿಗೆ ಬರಲಿದೆ. ಇದರ ಪ್ರಕಾರ, ಜುಲೈ-ಆಗಸ್ಟ್‌ನಲ್ಲಿ ಮೊದಲ ಪ್ರವೇಶಾತಿ ಪ್ರಕ್ರಿಯೆ ನಡೆದರೆ, ಜನವರಿ-ಫೆಬ್ರವರಿಯಲ್ಲಿ ಎರಡನೇ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತದೆ.
''ದೇಶದ ವಿಶ್ವವಿದ್ಯಾಲಯಗಳು ವರ್ಷಕ್ಕೆರಡು ಬಾರಿ ಪ್ರವೇಶಾತಿ ನೀಡಿದರೆ, ಅನೇಕ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ. ಆಡಳಿತ ಮಂಡಳಿಗಳಿಂದ ಫಲಿತಾಂಶಗಳ ಪ್ರಕಟಣೆ ವಿಳಂಬ, ಆರೋಗ್ಯ ಸಮಸ್ಯೆಗಳು ಅಥವಾ ವೈಯಕ್ತಿಕ ಕಾರಣಗಳಿಂದ ವಿದ್ಯಾರ್ಥಿಗಳು ಜುಲೈ-ಆಗಸ್ಟ್‌ನಲ್ಲಿ ಪ್ರವೇಶಾತಿ ತಪ್ಪಿಸಿಕೊಂಡರೆ, ಅಂಥವರು ದ್ವೈವಾರ್ಷಿಕದಲ್ಲಿ ಪ್ರವೇಶ ಪಡೆಯಲು ಅನುಕೂಲವಾಗಿದೆ. ಇದು ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸಲು ಪ್ರೇರೇಪಣೆ ನೀಡಲಿದೆ. ಏಕೆಂದರೆ, ಪ್ರವೇಶಾತಿ ಪಡೆಯಲು ಒಂದು ಪೂರ್ಣ ವರ್ಷ ಕಾಯಬೇಕಾಗಿಲ್ಲ'' ಎಂದು ಯುಜಿಸಿ ಅಧ್ಯಕ್ಷರು ಪಿಐಟಿ ಸುದ್ದಿಸಂಸ್ಥೆಗೆ ತಿಳಿಸಿದರು.
ಇಷ್ಟೇ ಅಲ್ಲ, ''ದ್ವೈವಾರ್ಷಿಕ ಪ್ರವೇಶಾತಿಗಳಿಂದ ಯುವ ಪ್ರತಿಭೆಗಳನ್ನು ಸೆಳೆಯುವ ಕಂಪನಿಗಳಿಗೆ ಅನುಕೂಲವಾಗಿದೆ. ತಮ್ಮ ಕ್ಯಾಂಪಸ್ ನೇಮಕಾತಿಯನ್ನು ವರ್ಷಕ್ಕೆರಡು ಬಾರಿ ಮಾಡಬಹುದು. ಜೊತೆಗೆ ಪದವೀಧರರಿಗೆ ಉದ್ಯೋಗಾವಕಾಶಗಳನ್ನೂ ಇದು ಸುಧಾರಿಸುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಂಪನ್ಮೂಲ ಸುಧಾರಣೆಗೂ ಅನುಕೂಲವಾಗಲಿದೆ. ಅಧ್ಯಾಪಕರು, ಲ್ಯಾಬ್‌ಗಳು, ತರಗತಿ ಕೊಠಡಿಗಳು ಮತ್ತು ಸರ್ಪೋಸ್ಟಿಂಗ್ ಸೇವೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಯೋಜಿಸಲು ಅನುವು ಮಾಡಿಕೊಡುತ್ತದೆ. ಇದರಿಂದಾಗಿ ವಿಶ್ವವಿದ್ಯಾಲಯಗಳಲ್ಲಿ ಉತ್ತಮ ಕ್ರಿಯಾತ್ಮಕ ಚಟುವಟಿಕೆಗಳು ಹೆಚ್ಚಾಗುತ್ತವೆ'' ಎಂದು ಅವರು ಮಾಹಿತಿ ನೀಡಿದರು.
''ವಿಶ್ವದಾದ್ಯಂತ ವಿಶ್ವವಿದ್ಯಾಲಯಗಳು ಈಗಾಗಲೇ ದ್ವೈವಾರ್ಷಿಕ ಪ್ರವೇಶಾತಿ ವ್ಯವಸ್ಥೆ ಅನುಸರಿಸುತ್ತಿವೆ. ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಸಹ ದ್ವೈವಾರ್ಷಿಕ ಪ್ರವೇಶಾತಿ ಚಕ್ರವನ್ನು ಅಳವಡಿಸಿಕೊಂಡರೆ, ನಮ್ಮ ಸಂಸ್ಥೆಗಳೂ ಸಹ ತಮ್ಮ ಅಂತಾರಾಷ್ಟ್ರೀಯ ಸಹಯೋಗ ಮತ್ತು ವಿದ್ಯಾರ್ಥಿಗಳ ವಿನಿಮಯ ಹೆಚ್ಚಿಸಿಕೊಳ್ಳಬಹುದು. ನಮ್ಮ ಜಾಗತಿಕ ಸ್ಪರ್ಧಾತ್ಮಕತೆಯೂ ಸುಧಾರಿಸುತ್ತದೆ. ನಾವು ಜಾಗತಿಕ ಶೈಕ್ಷಣಿಕ ಮಾನದಂಡಗಳೊಂದಿಗೆ ಹೊಂದಿಕೊಂಡಂತೆಯೂ ಆಗುತ್ತದೆ'' ಎಂದು ಅವರು ವಿವರಿಸಿದರು.
ಮುಂದುವರೆದು, ''ಉನ್ನತ ಶಿಕ್ಷಣ ಸಂಸ್ಥೆಗಳು ದ್ವೈವಾರ್ಷಿಕ ಪ್ರವೇಶಾತಿಗಳನ್ನು ಅಳವಡಿಸಿಕೊಂಡರೆ, ಆಡಳಿತಾತ್ಮಕ ಜಟಿಲತೆಗಳು, ಲಭ್ಯವಿರುವ ಸಂಪನ್ಮೂಲಗಳ ಹೆಚ್ಚಿನ ಬಳಕೆಗಾಗಿ ಉತ್ತಮ ಯೋಜನೆ ಮತ್ತು ವರ್ಷದ ವಿಭಿನ್ನ ಸಮಯಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಸುಗಮ ಪರಿವರ್ತನೆಗಾಗಿ ಕಾರ್ಯ ನಿರ್ವಹಿಸಬಹುದು. ಆದಾಗ್ಯೂ, ವಿಶ್ವವಿದ್ಯಾಲಯಗಳಿಗೆ ಈ ದ್ವೈವಾರ್ಷಿಕ ಪ್ರವೇಶಾತಿ ಕಡ್ಡಾಯವಲ್ಲ. ಅಗತ್ಯವಿರುವ ಮೂಲಸೌಕರ್ಯ ಮತ್ತು ಬೋಧನಾ ವಿಭಾಗವನ್ನು ಹೊಂದಿರುವ ಉನ್ನತ ಶಿಕ್ಷಣ ಸಂಸ್ಥೆಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ವರ್ಷಕ್ಕೆ ಎರಡು ಬಾರಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಶಿಕ್ಷಣ ಸಂಸ್ಥೆಗಳು ತಮ್ಮ ಸಾಂಸ್ಥಿಕ ನಿಯಮಗಳಿಗೆ ಸೂಕ್ತ ತಿದ್ದುಪಡಿಗಳನ್ನೂ ಮಾಡಿಕೊಳ್ಳಬೇಕು'' ಎಂದು ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:ಜೆಇಇ ಅಡ್ವಾನ್ಸ್ಡ್ 2024 ಫಲಿತಾಂಶ: ಪರೀಕ್ಷೆಯ ಕಟ್ ಆಫ್ 23 ಅಂಕಗಳು ಹೆಚ್ಚಳ, ಅರ್ಹ ಅಭ್ಯರ್ಥಿಗಳ ಸಂಖ್ಯೆಯಲ್ಲೂ ಏರಿಕೆ