ಬಟಿಂಡಾ (ಪಂಜಾಬ್):ಸರ್ಕಾರಿ ಶಾಲೆಗಳ ಸುಧಾರಣೆಗೆ ಅನೇಕ ಸರ್ಕಾರಗಳು ಸಾಕಷ್ಟು ಹಣ ಖರ್ಚು ಮಾಡುತ್ತಿವೆ. ಪಂಜಾಬ್ ಸರ್ಕಾರ ಸಹ ಸರ್ಕಾರಿ ಶಾಲೆಗಳನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಳಿಸಲು ಅನುದಾನ ನೀಡುತ್ತಿದೆ. ಆದರೆ, ಜನರು ಮಾತ್ರ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಬಟಿಂಡಾ ಜಿಲ್ಲೆಯ ಶಾಲೆಯೊಂದು ತಾಜಾ ನಿದರ್ಶನವಾಗಿದೆ. ಈ ಶಾಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಒಬ್ಬ ವಿದ್ಯಾರ್ಥಿ ಮಾತ್ರ ಓದುತ್ತಿದ್ದು, ಶಿಕ್ಷಕಿ ಸಹ ಒಬ್ಬರೇ ಇದ್ದಾರೆ.
ಇಲ್ಲಿನ ಕೋಥೆ ಬುಧ್ ಸಿಂಗ್ ವಾಲಾ ಎಂಬ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಒಬ್ಬ ಶಿಕ್ಷಕಿ ಇರುವ ದೃಶ್ಯ ಕಂಡು ಬರುತ್ತದೆ. ಈ ಗ್ರಾಮದಲ್ಲಿ ಸುಮಾರು 350 ಜನರು ವಾಸಿಸುತ್ತಾರೆ. ಆದರೆ, ಗ್ರಾಮಸ್ಥರು ಮಾತ್ರ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ನಿರಾಕರಿಸುತ್ತಿದ್ದಾರೆ. ಶಾಲೆಯಲ್ಲಿನ ಸೌಕರ್ಯಗಳ ಬಗ್ಗೆ ಹಾಗೂ ಸರ್ಕಾರದಿಂದ ಆಗುತ್ತಿರುವ ವ್ಯವಸ್ಥೆಗಳ ಬಗ್ಗೆ ಶಿಕ್ಷಣ ಇಲಾಖೆಯು ಗ್ರಾಮಸ್ಥರಿಗೆ ಮನವರಿಕೆ ಮಾಡಿಸುವ ಪ್ರಯತ್ನ ನಡೆಯುತ್ತಿದೆ. ಆದರೂ, ಇಂದಿಗೂ ಗ್ರಾಮಸ್ಥರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಆಸಕ್ತಿ ತೋರುತ್ತಿಲ್ಲ.
ಈ ಶಾಲೆಯ ಕಟ್ಟಡವು ಸುಸಜ್ಜಿತವಾಗಿದೆ. ಕಲಿಕೆಗೆ ಅಗತ್ಯವಾದ ಸೌಕರ್ಯಗಳನ್ನು ಹೊಂದಿದೆ. ಆದರೆ, ಕಳೆದ 3 ವರ್ಷಗಳಿಂದ ಭಿಂದರ್ ಸಿಂಗ್ ಎಂಬ ಓರ್ವ ವಿದ್ಯಾರ್ಥಿ ಮಾತ್ರ ಶಾಲೆಗೆ ಬರುತ್ತಿದ್ದಾನೆ. ಈತ 5ನೇ ತರಗತಿ ಒದುತ್ತಿದ್ದಾನೆ. ಕಳೆದ ಮೇ ತಿಂಗಳಿನಲ್ಲಿ ಈ ಶಾಲೆಗೆ ಹೊಸದಾಗಿ ಶಿಕ್ಷಕಿ ಸರಬ್ಜಿತ್ ಕೌರ್ ಎಂಬವರು ಸೇರ್ಪಡೆಯಾಗಿದ್ದಾರೆ. ಈಗ ಶಾಲೆಯು ಒಂದು ವಿದ್ಯಾರ್ಥಿ, ಓರ್ವ ಶಿಕ್ಷಕಿಯಿಂದಲೇ ನಡೆಯುತ್ತಿದೆ.