ಚಂಡೀಗಢ: ಮೂರು ದಿನಗಳ ಅಮೆರಿಕ ಪ್ರವಾಸ ಮುಗಿಸಿ ಮರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಹರಿಯಾಣಕ್ಕೆ ಭೇಟಿ ನೀಡಲಿದ್ದು, ಮತಬೇಟೆ ನಡೆಸುವರು.
90 ಕ್ಷೇತ್ರಗಳನ್ನು ಒಳಗೊಂಡಿರುವ ಹರಿಯಾಣ ವಿಧಾನಸಭಾ ಚುನಾವಣೆಗೆ ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಈಗಾಗಲೇ ಒಮ್ಮೆ ರಾಜ್ಯದಲ್ಲಿ ಮತಪ್ರಚಾರ ನಡೆಸಿರುವ ನರೇಂದ್ರ ಮೋದಿ, ಇದೀಗ ಎರಡನೇ ಬಾರಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಸೋನಿಪತ್ ಜಿಲ್ಲೆಯ ಗೊಹಾನಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಅವರು ಭಾಷಣ ಮಾಡಲಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಂಘಟಕರು, "ಚುನಾವಣಾ ಸಮಾವೇಶಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆದಿದೆ. ಅಲ್ಯೂಮಿನಿಯಂ ಪೆಂಡಾಲ್ ನಿರ್ಮಿಸಲಾಗಿದೆ. ಸಮಾವೇಶ ನಡೆಯುವ ಸ್ಥಳದ ಸಮೀಪದಲ್ಲಿ ಮೂರು ಹೆಲಿಪ್ಯಾಡ್ ನಿರ್ಮಿಸಲಾಗಿದ್ದು, ಹೆಲಿಕ್ಯಾಪ್ಟರ್ಗಳು ಟೆಕ್ಅಫ್ ಮತ್ತು ಲ್ಯಾಂಡಿಂಗ್ ಮಾಡುವ ಕುರಿತು ಸೋಮವಾರ ರಿಹರ್ಸಲ್ ನಡೆಸಲಾಗಿದೆ" ಎಂದು ತಿಳಿಸಿದರು.
ಪ್ರಧಾನಿ ಸಮಾವೇಶದಲ್ಲಿ ಹಿರಿಯ ಬಿಜೆಪಿ ನಾಯಕರು ಸೇರಿದಂತೆ ಸಿಎಂ ನಯಾಬ್ ಸಿಂಗ್ ಸೈನಿ ಭಾಗಿಯಾಗುವರು. ಸುಮಾರು 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರಧಾನಿ ಮೋದಿ ಅವರ ಈ ರ್‍ಯಾಲಿಯನ್ನು ಯಶಸ್ವಿಯಾಗಿಸುವಂತೆ ಈಗಾಗಲೇ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ.