ನವದೆಹಲಿ:ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಸಂಜೆ ಇಟಲಿ ಪ್ರವಾಸ ಕೈಗೊಂಡರು. ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಮೋದಿ ಅವರಿಗಿದು ಮೊದಲ ವಿದೇಶ ಪ್ರವಾಸವಾಗಿದೆ. ಕೃತಕ ಬುದ್ಧಿಮತ್ತೆ (ಎಐ), ಇಂಧನ, ಆಫ್ರಿಕಾ ಮತ್ತು ಮೆಡಿಟರೇನಿಯನ್ ವಿಚಾರಗಳ ಮೇಲೆ ಚರ್ಚೆ ನಡೆಸಲಾಗುವುದು ಎಂದು ಅವರು ತಮ್ಮ ನಿರ್ಗಮನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಟಲಿಗೆ ಹೊರಡುವುದಕ್ಕೂ ಮೊದಲು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಹ್ವಾನದ ಮೇರೆಗೆ ಪ್ರವಾಸ ಹೋಗುತ್ತಿದ್ದೇನೆ. ಜೂನ್ 14 ರಂದು ಅಪುಲಿಯಾದಲ್ಲಿ ನಡೆಯುವ ಶೃಂಗದಲ್ಲಿ ಭಾಗವಹಿಸುವೆ. ವಿಶ್ವದ ಗಣ್ಯ ನಾಯಕರ ಜೊತೆಗೆ ಭೂಮಿ ಮತ್ತು ಜನರ ಜೀವನ ಸುಧಾರಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಕಚೇರಿಯಿಂದ ಹೇಳಿಕೆ ಬಿಡುಗಡೆ ಮಾಡಲಾಗಿದ್ದು, ಮೂರನೇ ಅವಧಿಯಲ್ಲಿ ಮೊದಲ ಇಟಲಿ ಪ್ರವಾಸ ಇದಾಗಿದೆ. ಜಿ7 ಶೃಂಗಸಭೆಗೂ ಮುನ್ನ 2021ರಲ್ಲಿ ನಡೆದ ಜಿ20 ಶೃಂಗದಲ್ಲಿ ಭಾಗಿಯಾಗಿದ್ದೆ. ಕಳೆದ ವರ್ಷ ಇಟಲಿ ಪ್ರಧಾನಿ ಮೆಲೋನಿ ಅವರು ಎರಡು ಬಾರಿ ಭಾರತ ಭೇಟಿ ನೀಡಿದ್ದರು. ಈ ವೇಳೆ ದ್ವಿಪಕ್ಷೀಯ ಮಾತುಕತೆಯಲ್ಲಿ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳಿಗೆ ವೇಗ ಮತ್ತು ಗಾಢತೆ ನೀಡಲು ಪ್ರಯತ್ನಿಸಲಾಗಿತ್ತು. ಭಾರತ-ಇಟಲಿ ಪಾಲುದಾರಿಕೆಯಲ್ಲಿ ಇಂಡೋ-ಪೆಸಿಫಿಕ್ ಮತ್ತು ಮೆಡಿಟರೇನಿಯನ್ ಪ್ರದೇಶಗಳಲ್ಲಿ ಸಹಕಾರವನ್ನು ಬಲಪಡಿಸಲು ಬದ್ಧರಾಗಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.
ಏನಿದು ಜಿ7 ಶೃಂಗಸಭೆ?:ಮಧ್ಯಪ್ರಾಚ್ಯ ರಾಷ್ಟ್ರಗಳಾದ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಇಟಲಿ, ಜರ್ಮನಿ, ಕೆನಡಾ ಮತ್ತು ಜಪಾನ್ ಒಳಗೊಂಡ ಒಕ್ಕೂಟವೇ ಜಿ7. ಇದನ್ನು ಸದಸ್ಯ ರಾಷ್ಟ್ರಗಳ ನಡುವೆ ವ್ಯಾಪಾರ, ಬಾಂಧವ್ಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಮೇಲೆ ನಿಯಂತ್ರಣ ಸಾಧಿಸಲು ರಚಿಸಿಕೊಳ್ಳಲಾಗಿದೆ. ಈ ಮೊದಲು ಜಿ8 ಶೃಂಗವಾಗಿತ್ತು. ರಷ್ಯಾ ಇದರ ಸದಸ್ಯತ್ವ ಹೊಂದಿತ್ತು. 2014 ರಲ್ಲಿ ಕ್ರಿಮಿಯಾದ ಮೇಲೆ ಯುದ್ಧ ಮಾಡಿ ವಶಕ್ಕೆ ಪಡೆದ ಬಳಿಕ ಶೃಂಗದಿಂದ ಕೈಬಿಡಲಾಯಿತು. ಬಳಿಕ ಇದು 7 ರಾಷ್ಟ್ರಗಳ ಸದಸ್ಯತ್ವ ಹೊಂದಿದೆ. ಪ್ರತಿವರ್ಷವೂ ಶೃಂಗ ಸಭೆ ನಡೆಯಲಿದ್ದು, ಒಂದೊಂದು ದೇಶ ಆತಿಥ್ಯ ವಹಿಸುತ್ತದೆ. ಈ ಬಾರಿ ಇಟಲಿಯ ಸರದಿ.
ಇದನ್ನೂ ಓದಿ:ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜೂ.13ರಂದು ಪ್ರಧಾನಿ ಮೋದಿ ಇಟಲಿಗೆ - G7 Summit