ರಜೌರಿ(ಜಮ್ಮು ಮತ್ತು ಕಾಶ್ಮೀರ):ಭಾರತೀಯಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸಿದ ಇಬ್ಬರು ಭಯೋತ್ಪಾದಕರನ್ನು ಭಾರತೀಯ ಸೇನೆ ಭಾನುವಾರ ರಾತ್ರಿ ಹೊಡೆದುರುಳಿಸಿದೆ. ಇಲ್ಲಿನ ರಾಜೌರಿ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆಯಿತು.
ಜಮ್ಮು-ಕಾಶ್ಮೀರ ಪೊಲೀಸ್ ಹಾಗು ಗುಪ್ತಚರ ಇಲಾಖೆ ಉಗ್ರರ ಒಳನುಸುಳುವಿಕೆಯ ಕುರಿತು ಸುಳಿವು ನೀಡಿತ್ತು. ಈ ಮಾಹಿತಿ ಆಧರಿಸಿ ಭಯೋತ್ಪಾದಕರ ಚಲನವಲನ ಪತ್ತೆ ಹಚ್ಚಿದ ಯೋಧರು ಕಾರ್ಯಾಚರಣೆ ಪ್ರಾರಂಭಿಸಿದ್ದರು. ಈ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಕುರಿತು ಸೇನೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. 'ಉಗ್ರರ ಒಳನುಸುಳುವಿಕೆ ಸಂಬಂಧಿಸಿದಂತೆ ಗುಪ್ತಚರ ಸಂಸ್ಥೆಗಳು ಮತ್ತು ಪೊಲೀಸರ ಮಾಹಿತಿಯ ಆಧಾರದಡಿ ಸೆಪ್ಟೆಂಬರ್ 8 ಮತ್ತು 9ರ ಮಧ್ಯರಾತ್ರಿ ನೌಶೇರಾದ ಲಾಮ್ ಸೆಕ್ಟರ್ ಪ್ರದೇಶದಲ್ಲಿ ಒಳನುಸುಳುವಿಕೆಯ ವಿರುದ್ಧ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಇಬ್ಬರು ನುಸುಳುಕೋರರನ್ನು ಹತ್ಯೆಗೈಯಲಾಗಿದೆ. ಎರಡು AK-47 ಗನ್, ಒಂದು ಪಿಸ್ತೂಲ್ ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ' ಎಂದು ತಿಳಿಸಿದೆ.
ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಹೆಚ್ಚುತ್ತಿವೆ. ಇಲ್ಲಿನ ಪೀರ್ ಪಂಜಾಲ್ ಶ್ರೇಣಿ ಎನ್‌ಕೌಂಟರ್‌ಗಳಿಗೆ ಕೇಂದ್ರವಾಗುತ್ತಿದೆ. ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ನಂತರ ಉಗ್ರರು ಕಾಶ್ಮೀರದಿಂದ ರಜೌರಿ, ಪೂಂಚ್, ದೋಡಾ, ಕಿಶ್ತ್ವಾರ್ ಮತ್ತು ಕಥುವಾ ಸೇರಿದಂತೆ ಜಮ್ಮು ಪ್ರದೇಶದ ಅರಣ್ಯ ಪ್ರದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ.
ಇದನ್ನೂ ಓದಿ:ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಆ್ಯಂಟಿ ಡ್ರೋನ್, ಭದ್ರತಾ ಸಿಬ್ಬಂದಿ ಹೆಚ್ಚಿಸಿದ ರಾಜ್ಯ ಸರ್ಕಾರ - Manipur Violence