ನವದೆಹಲಿ: ಹರಿಯಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಕಾಂಗ್ರೆಸ್ ಸೇರ್ಪಡೆಯಾಗಿರುವ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಕೂಡ ಚುನಾವಣಾ ಕಣಕ್ಕೆ ಇಳಿದಿದ್ದು, ಜುಲಾನಾ ಕ್ಷೇತ್ರದಿಂದ ಸ್ಪರ್ಧೆಸುತ್ತಿದ್ದಾರೆ.
ಹರಿಯಾಣ ವಿಧಾನಸಭೆಯ 90 ಕ್ಷೇತ್ರಗಳಲ್ಲಿ ಅಕ್ಟೋಬರ್ 5 ರಂದು ಮತದಾನ ಮತ್ತು ಅ.8 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಅದರಲ್ಲಿ ವಿನೇಶ್ ಫೋಗಟ್ ಕೂಡ ಅವಕಾಶ ಪಡೆದಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ವೇಣುಗೋಪಾಲ್ ಅವರನ್ನು ವಿನೇಶ್ ಫೋಗಟ್ ಮತ್ತು ಬಜರಂಗ್ ಶುಕ್ರವಾರ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಆ ಬಳಿಕ ರಾತ್ರಿ ವೇಳೆ ಹರಿಯಾಣ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲಾಗಿದೆ.
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ವಿನೇಶ್ ಫೋಗಟ್ ಮಾತನಾಡಿ, ನಮಗೆ ಭಯವಿಲ್ಲ ಮತ್ತು ಹೆಜ್ಜೆ ಹಿಂದಿಡಲ್ಲ. ನಮ್ಮ ಪ್ರಕರಣ ಕೋರ್ಟ್ನಲ್ಲಿ ನಡೆಯುತ್ತಿದ್ದು, ಗೆಲ್ಲುವ ವಿಶ್ವಾಸವಿದೆ. ಜೊತೆಗೆ ನ್ಯಾಯಕ್ಕಾಗಿ ನಮ್ಮ ಹೋರಾಟಕ್ಕೆ ಕಾಂಗ್ರೆಸ್ ಬೆನ್ನೆಲುಬಾಗಿ ನಿಂತಿತ್ತು ಎಂದು ಹೇಳಿದ್ದಾರೆ.
ರೈಲ್ವೆ ಹುದ್ದೆಗೆ ರಾಜೀನಾಮೆ:ಭಾರತೀಯ ರೈಲ್ವೆ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ವಿನೇಶ್ ಫೋಗಟ್ ಶುಕ್ರವಾರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ್ದರು. ರೈಲ್ವೆ ಹುದ್ದೆಗೆ ನೀಡಿದ ರಾಜೀನಾಮೆ ಪತ್ರದಲ್ಲಿ ವೈಯಕ್ತಿಕ ಕಾರಣ ಎಂದು ನಮೂದಿಸಿದ್ದಾರೆ.
ರೈಲ್ವೆ ಇಲಾಖೆಯ ಹುದ್ದೆಗೆ ರಾಜೀನಾಮೆ ಸಲ್ಲಿಕೆ ಮಾಡಿರುವ ಪತ್ರವನ್ನು ತಮ್ಮ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಭಾರತೀಯ ರೈಲ್ವೆಯಲ್ಲಿ ಸೇವೆ ಸಲ್ಲಿಸಿದ್ದು, ನನ್ನ ಜೀವನದ ಸ್ಮರಣೀಯ ಮತ್ತು ಹೆಮ್ಮೆಯ ದಿನ ಎಂದು ಬರೆದಿದ್ದಾರೆ. ಫೋಗಟ್, ಉತ್ತರ ರೈಲ್ವೆಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿದ್ದರು.
ಒಲಿಂಪಿಕ್ ಅನರ್ಹತೆ ಬೆನ್ನಲ್ಲೇ ಕುಸ್ತಿಗೆ ವಿದಾಯ ಘೋಷಿಸಿದ್ದ ವಿನೇಶ್ ಫೋಗಟ್ಗೆ ಬುಧವಾರ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದರು. ಈ ಬೆನ್ನಲ್ಲೇ ಇಂದು ಅವರು ನವದೆಹಲಿಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿಯಾದರು. ಇವರ ಜೊತೆಗೆ ಕುಸ್ತಿಪಟು ಬಜರಂಗ್ ಪೂನಿಯಾ ಕೂಡ ಇಂದು ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಉನ್ನತ ಮಟ್ಟದ ನಾಯಕರ ಭೇಟಿಯಾಗಿ, ಪಕ್ಷ ಸೇರಿರುವ ಚಿತ್ರವನ್ನು ಕಾಂಗ್ರೆಸ್ ತನ್ನ ಅಧಿಕೃತ ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಆರೋಪಿಸಿ ಎಂದು ಕುಸ್ತಿಪಟುಗಳು ಭಾರೀ ಹೋರಾಟ ನಡೆಸಿದ್ದರು.
ಇದನ್ನೂ ಓದಿ:ಜಿಲ್ಲಾ ಕಾರಾಗೃಹದಲ್ಲಿ ಸನ್ಯಾಸ ದೀಕ್ಷೆ ಪಡೆದ ಭೂಗತ ಪಾತಕಿ ಪ್ರಕಾಶ್ ಪಾಂಡೆ! - Don Prakash Pandey