ಜೈಪುರ: ಮದುವೆಯಾಗಿ ಹೊಸ ಬದುಕು ಆರಂಭಿಸಬೇಕಿದ್ದ ಕಾನ್ಸ್ಟೇಬಲ್ ಇದೀಗ ತನ್ನ ದುರಾಸೆಯಿಂದ ಜೈಲು ಕಂಬಿ ಎಣಿಸುವಂತೆ ಆಗಿದೆ. ರಾಜಸ್ಥಾನದ ನೀಮ್ ಕಾ ಥಾಣಾದಲ್ಲಿ ಮದುವೆ ಮಾಡಿಕೊಳ್ಳಲು ವಧುವಿನ ಕುಟುಂಬದಿಂದ ಹಣ ಸುಲಿಗೆ ಮಾಡಲು ಯತ್ನಿಸಿದ ವರನ ವಿರುದ್ಧ ಮಧುಮಗಳೇ ಪೊಲೀಸರಿಗೆ ದೂರು ನೀಡಿದ್ದಾಳೆ.
ಏನಿದು ಘಟನೆ?: ರಾಜಸ್ಥಾನದ ನೀಮ್ ಕಾ ಥಾಣಾದ ಕೊಟ್ವಾಲಿ ಪ್ರದೇಶದ ಐಟಿಪಿಬಿ ಕಾನ್ಸ್ಟೇಬಲ್ ಮದುವೆ ನಿಶ್ಚವಾಗಿತ್ತು. ಮದುವೆ ಸಂಬಂಧ ಈಗಾಗಲೇ 5 ಲಕ್ಷ ರೂ ಹಣವನ್ನು ನಗದು ರೂಪದಲ್ಲಿ ಆತ ಪಡೆದಿದ್ದ ಎಂಬ ಆರೋಪ ಇದೆ. ಇಷ್ಟಾದರೂ ದುರಾಸೆ ಮುಂದುವರೆಸಿದ ಮಧುಮಗ ಮದುವೆ ವಿದಾಯಿ ಕಾರ್ಯಕ್ರಮದಲ್ಲಿ ಮತ್ತೆ ಐದು ಲಕ್ಷ ಹಣ ಮತ್ತು ಬೈಕ್ ನೀಡಿದರೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ತಿಳಿಸಿದ ಎನ್ನಲಾಗಿದೆ. ಇದನ್ನು ತಿಳಿದ ವಧು, ಅಂತಿಮವಾಗಿ ಆತನ ಜೊತೆಗೆ ಗಂಡನ ಮನೆಗೆ ಹೋಗಲು ನಿರಾಕರಿಸಿದ್ದಾಳೆ. ಇದರಿಂದ ಎರಡು ಕುಟುಂಬಗಳ ನಡುವೆ ವಾಗ್ದಾದ ಏರ್ಪಟ್ಟಿದೆ. ಈ ವೇಳೆ ವರನ ಕುಟುಂಬದ ಸಂಬಂಧಿಕರು ಕೂಡಾ ಅನುಚಿತ ವರ್ತನೆ ತೋರಿದ್ದು, ಪರಿಸ್ಥಿತಿ ಕೈ ಮೀರಿದೆ. ತಕ್ಷಣಕ್ಕೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್ಪೆಕ್ಟರ್ ಹರಿನರಾಯಣನ್ ಮೀನಾ, ಪ್ರಕರಣದ ಸಂಬಂಧ ವರ ಮತ್ತು ಆತನ ತಂದೆ ಸೇರಿದಂತೆ ಐದು ಮಂದಿಯನ್ನು ಬಂಧಿಸಿದ್ದಾರೆ.