ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪರಿಣಾಮಕಾರಿ ಮತ್ತು ಜವಾಬ್ದಾರಿಯುತ ಸರ್ಕಾರವನ್ನು ಆಯ್ಕೆ ಮಾಡುವಂತೆ ಮತದಾರರ ಮನವೊಲಿಸಲು ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್ಎಸ್)ವು ತನ್ನಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡಿತ್ತು ಹಾಗೂ ಪ್ರಯತ್ನಗಳು ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಜಯಕ್ಕೆ ಬಹುದೊಡ್ಡ ಕೊಡುಗೆ ನೀಡಿವೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ಪಕ್ಷಗಳ ತೀವ್ರ ಪೈಪೋಟಿಯ ಚುನಾವಣಾ ಪ್ರಚಾರದ ಮಧ್ಯೆ, ಆರ್‌ಎಸ್ಎಸ್ ಸ್ವಯಂಸೇವಕರು ಮೌನವಾಗಿಯೇ ಮತದಾರರ ಜಾಗೃತಿ ಅಭಿಯಾನವನ್ನು ನಡೆಸಿದರು. ದೆಹಲಿಯಲ್ಲಿ ಸ್ವಚ್ಛತೆಯ ಕೊರತೆ, ಕುಡಿಯುವ ನೀರು ಸರಬರಾಜು, ಆರೋಗ್ಯ ಸೇವೆಗಳು, ವಾಯುಮಾಲಿನ್ಯ ಸಮಸ್ಯೆಗಳು ಮತ್ತು ಯಮುನಾ ನದಿಯನ್ನು ಶುಚಿಗೊಳಿಸುವಿಕೆಯಂತಹ ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಆರ್‌ಎಸ್ಎಸ್ ದೆಹಲಿಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿ ಡ್ರಾಯಿಂಗ್ ರೂಮ್ ಸಭೆಗಳನ್ನು (ಸಣ್ಣ ಗುಂಪು ಸಭೆಗಳು) ನಡೆಸಿತ್ತು ಎಂದು ಹೇಳಲಾಗಿದೆ.
ಈ ಸಭೆಗಳಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ತನ್ನ 10 ವರ್ಷಗಳ ಆಡಳಿತದಲ್ಲಿ ಮಾಡಿದ ಭ್ರಷ್ಟಾಚಾರ ಮತ್ತು ಹಲವಾರು ಭರವಸೆಗಳನ್ನು ಈಡೇರಿಸದಿರುವ ವಿಷಯವನ್ನು ಎತ್ತಿ ತೋರಿಸುವ ಮೂಲಕ ಆಮ್ ಆದ್ಮಿ ಪಕ್ಷದ (ಎಎಪಿ) ದೆಹಲಿ ಮಾಡೆಲ್ ಆಡಳಿತದ ಬಗೆಗಿನ ಭ್ರಮೆಯನ್ನು ಕಳಚಲು ಪ್ರಯತ್ನಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಸಭೆಗಳಲ್ಲಿ ದೆಹಲಿಯಲ್ಲಿನ ಅಕ್ರಮ ವಲಸಿಗರ ವಿಷಯದ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
"ದ್ವಾರಕಾ ಒಂದರಲ್ಲೇ ಕನಿಷ್ಠ 500 ಡ್ರಾಯಿಂಗ್ ರೂಮ್ (ಸಣ್ಣ ಗುಂಪು) ಸಭೆಗಳು ನಡೆದಿವೆ" ಎಂದು ಆರ್‌ಎಸ್ಎಸ್ ಮೂಲಗಳು ಪಿಟಿಐಗೆ ತಿಳಿಸಿವೆ.
"ಇಂತಹ ಸಭೆಗಳಲ್ಲಿ ಆರ್‌ಎಸ್ಎಸ್ ಸ್ವಯಂಸೇವಕರು ಜನರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳನ್ನು ಮಾತ್ರ ಎತ್ತಿ ತೋರಿಸಿ, ಅವುಗಳ ಬಗ್ಗೆ ಮಾತ್ರ ಚರ್ಚಿಸಿದ್ದರು. ಯಾವುದೇ ನಿರ್ದಿಷ್ಟ ರಾಜಕೀಯ ಪಕ್ಷವನ್ನು ಬೆಂಬಲಿಸಿ ಮತ ಚಲಾಯಿಸುವಂತೆ ಅವರು ನೇರವಾಗಿ ಮತದಾರರಿಗೆ ಹೇಳಲಿಲ್ಲ. ಜನರಿಗೆ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲಾಯಿತು ಮತ್ತು ಪರಿಣಾಮಕಾರಿ ಹಾಗೂ ಜವಾಬ್ದಾರಿಯುತ ಸರ್ಕಾರವನ್ನು ಆಯ್ಕೆ ಮಾಡಲು ತಮ್ಮ ಮತಗಳನ್ನು ಚಲಾಯಿಸುವಂತೆ ಪ್ರೇರೇಪಿಸಲಾಯಿತು" ಎಂದು ಮೂಲಗಳು ತಿಳಿಸಿವೆ.