ನವದೆಹಲಿ: ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಇಂದು ಅತಿಶಿ ರಾಜೀನಾಮೆ ನೀಡಿದ್ದಾರೆ. ಬೆಳಗ್ಗೆ 11 ಗಂಟೆಗೆ ತಮ್ಮ ನಿವಾಸದಿಂದ ನೇರವಾಗಿ ರಾಜಭವನಕ್ಕೆ ಆಗಮಿಸಿದ ಅವರು ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದರು.
ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ನಿನ್ನೆ (ಶನಿವಾರ) ಪ್ರಕಟಗೊಂಡಿತು. ಒಟ್ಟು 70 ಸ್ಥಾನಗಳ ಪೈಕಿ 48 ಸ್ಥಾನಗಳೊಂದಿಗೆ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಇದರೊಂದಿಗೆ 27 ವರ್ಷಗಳ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಷ್ಟೇ ಅಲ್ಲದೇ, ಆಮ್ ಆದ್ಮಿ ಪಾರ್ಟಿಯ ದಶಕದ ಆಡಳಿತವೂ ಕೊನೆಗೊಂಡಿದೆ. ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ಖಾತೆ ತೆರೆಯಲು ಮತ್ತೆ ವಿಫಲವಾಗಿದೆ.
ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 22 ಸ್ಥಾನಗಳನ್ನಷ್ಟೇ ಗೆದ್ದಿದ್ದು, ಪ್ರಮುಖ ನಾಯಕರಾದ ಪಕ್ಷದ ಸಂಚಾಲಕ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಸೇರಿದಂತೆ ಹಲವರು ಸೋಲನ್ನಪ್ಪಿದ್ದಾರೆ.
ಇದನ್ನೂ ಓದಿ:ಎದ್ದಲ್ಲೇ ಬಿದ್ದ ಆಮ್ ಆದ್ಮಿ : ದೆಹಲಿಯಲ್ಲಿ ಹುಟ್ಟಿದ ಪಕ್ಷಕ್ಕೆ ಅಲ್ಲೇ ಸೋಲು, ಪಂಜಾಬಲ್ಲಿ ಮಾತ್ರ ಅಧಿಕಾರ