ನವದೆಹಲಿ:ಅಮೆರಿಕದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಪ್ರಧಾನಿ ಮೋದಿ ಈ ಘಟನೆಯನ್ನು ಖಂಡಿಸಿದ್ದಾರೆ.
''ನನ್ನ ಸ್ನೇಹಿತ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿಯಿಂದ ನಾನು ತೀವ್ರ ಕಳವಳಗೊಂಡಿದ್ದೇನೆ'' ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.
''ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜಕೀಯ ಮತ್ತು ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಜಾಗವಿಲ್ಲ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪವಿದೆ. ಮೃತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕರುಣಿಸಲಿ. ಗಾಯಗೊಂಡವರು ಚೇತರಿಸಿಕೊಳ್ಳಲಿ'' ಪ್ರಧಾನಿ ಮೋದಿ ಪ್ರಾರ್ಥಿಸಿದ್ದಾರೆ.
ದಾಳಿ ಖಂಡಿಸಿದ ರಾಹುಲ್ ಗಾಂಧಿ:ಡೊನಾಲ್ಡ್ ಟ್ರಂಪ್ ಮೇಲಿನ ಗುಂಡಿನ ದಾಳಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಖಂಡಿಸಿದ್ದಾರೆ. ''ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲಿನ ಮಾರಣಾಂತಿಕ ದಾಳಿಯಿಂದ ನಾನು ತೀವ್ರ ಕಳವಳಗೊಂಡಿದ್ದೇನೆ. ಇಂತಹ ಕೃತ್ಯಗಳನ್ನು ಬಲವಾಗಿ ಖಂಡಿಸಬೇಕು. ಅವರ ಶೀಘ್ರ ಮತ್ತು ಸಂಪೂರ್ಣ ಚೇತರಿಸಿಕೊಳ್ಳಲಿ'' ಎಂದು ರಾಹುಲ್ ಗಾಂಧಿ ಹಾರೈಸಿದ್ದಾರೆ.
ಹಲವು ಸುತ್ತಿನ ಗುಂಡು ಹಾರಿಸಿದ ದುಷ್ಕರ್ಮಿ:ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಪೆನ್ಸಿಲ್ವೇನಿಯಾದ ಬಟ್ಲರ್‌ನಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ವೇದಿಕೆಯಲ್ಲಿ ಟ್ರಂಪ್ ಮಾತನಾಡುತ್ತಿದ್ದಾಗ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾರೆ. ದುಷ್ಕರ್ಮಿ ಒಂದರ ಹಿಂದೊಂದರಂತೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಭದ್ರತಾ ಪಡೆಯ ಸಿಬ್ಬಂದಿ ಕೂಡಲೇ ಟ್ರಂಪ್ ಅವರನ್ನು ಸ್ಥಳದಿಂದ ಹೊರಗೆ ಕರೆದೊಯ್ದರು.
ದಾಳಿಯಲ್ಲಿ ಶೂಟರ್ ಸೇರಿ ಇಬ್ಬರು ಸಾವು:ಅಮೆರಿಕದ ಮಾಧ್ಯಮ ವರದಿಗಳ ಪ್ರಕಾರ, ಟ್ರಂಪ್ ಮೇಲೆ ಬುಲೆಟ್ ಹಾರಿದ ತಕ್ಷಣ, ಭದ್ರತಾ ಪಡೆಯ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಪ್ರತಿದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಶೂಟರ್ ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಶಂಕಿತ ಶೂಟರ್ ಹತ್ಯೆ - Attack on Donald Trump