ಚೆನ್ನೈ (ತಮಿಳುನಾಡು):ಫೆಂಗಲ್ ಚಂಡಮಾರುತ ಅಬ್ಬರದಿಂದ ಕರಾವಳಿ ತಮಿಳುನಾಡಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಚೆನ್ನೈನಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಸಾವನ್ನಪ್ಪಿದ್ದಾರೆ.
ಮುತ್ಯಾಲಪೇಟೆಯ ಎಟಿಎಂ ಬಳಿ ವಿದ್ಯುತ್ ಸ್ಪರ್ಶದಿಂದ ಉತ್ತರ ಪ್ರದೇಶದ ನಿವಾಸಿ ಚಂದನ್ ಮೃತಪಟ್ಟಿದ್ದಾರೆ. ಅದೇ ರೀತಿ ವ್ಯಾಸರಪಾಡಿಯ ಗಣೇಶಪುರಂನ ಇಸೈವನನ್ ಎಂಬುವರು ಸಬ್‌ವೇಯಿಂದ ನೀರು ತೆಗೆಯುವ ವೇಳೆ ವಿದ್ಯುತ್ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ವೇಲಚೇರಿಯ ವಿಜಯನಗರದಲ್ಲಿ, 47 ವರ್ಷ ವಯಸ್ಸಿನ ಶಕ್ತಿವೇಲ್ ಅವರು ಭಾರೀ ಮಳೆ ಮತ್ತು ಗಾಳಿಯಿಂದ ಅಸ್ತವ್ಯಸ್ತವಾಗಿದ್ದ ವಿದ್ಯುತ್ ತಂತಿಯನ್ನು ತುಳಿದು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪರಿಹಾರ ಘೋಷಿಸಿದ್ದಾರೆ.
ಶನಿವಾರ ಸಂಜೆ ಫೆಂಗಲ್ ಚಂಡಮಾರುತ ತಮಿಳುನಾಡು ಮತ್ತು ಪುದುಚೇರಿ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ್ದು, ಭಾರೀ ಮಳೆಯಿಂದಾಗಿ ಚೆನ್ನೈ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡಿದೆ. ಶನಿವಾರದಿಂದ ಚೆನ್ನೈ, ಹತ್ತಿರದ ಜಿಲ್ಲೆಗಳಲ್ಲಿ ಮತ್ತು ಪುದುಚೇರಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಫೆಂಗಲ್ ಪರಿಣಾಮದಿಂದಾಗಿ ಕೆಲವಡೆ ಭೂಕುಸಿತಗಳು ಕೂಡ ಸಂಭವಿಸಿವೆ. ಪುದುಚೇರಿಯಲ್ಲಿ ಪ್ರವಾಹಕ್ಕೊಳಗಾದ ಪ್ರದೇಶದಿಂದ ಸುಮಾರು 100ಕ್ಕೂ ಹೆಚ್ಚು ಜನರನ್ನು ಭಾರತೀಯ ಸೇನೆ ರಕ್ಷಿಸಿದೆ. ನಿರಂತರ ಮಳೆಯಿಂದಾಗಿ ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಜಲಾವೃತಗೊಂಡು ದೈನಂದಿನ ಜೀವನ ಅಸ್ತವ್ಯಸ್ತಗೊಂಡಿದೆ. ಚೆನ್ನೈ, ಕಡಲೂರು, ನಾಗಪಟ್ಟಣಂ ಮತ್ತು ವಿಲ್ಲುಪುರಂ ಜಿಲ್ಲೆಗಳಿಗೆ IMD ರೆಡ್ ಅಲರ್ಟ್ ನೀಡಿದೆ.
ಕಳೆದ 6 ಗಂಟೆಗಳ ಅವಧಿಯಲ್ಲಿ ಫೆಂಗಲ್ ಚಂಡಮಾರುತ ಉತ್ತರ ಕರಾವಳಿ ತಮಿಳುನಾಡು ಹಾಗೂ ಪುದುಚೇರಿ ಕರಾವಳಿಯಲ್ಲಿ ಸ್ಥಿರವಾಗಿದೆ. ಪುದುಚೇರಿಗೆ ಹತ್ತಿರದಲ್ಲಿದ್ದು, ಕಡಲೂರಿನಿಂದ ಉತ್ತರಕ್ಕೆ ಸುಮಾರು 30 ಕಿ.ಮೀ, ವಿಲ್ಲುಪುರಂನಿಂದ ಪೂರ್ವಕ್ಕೆ 40 ಕಿ.ಮೀ, ಚೆನ್ನೈನಿಂದ ನೈಋತ್ಯಕ್ಕೆ 120 ಕಿ.ಮೀ.ದೂರಕ್ಕಿದೆ. ಇದು ನಿಧಾನವಾಗಿ ಪಶ್ಚಿಮಾಭಿಮುಖವಾಗಿ ಚಲಿಸುವ ಸಾಧ್ಯತೆಯಿದೆ. ಮುಂದಿನ ಕೆಲ ಗಂಟೆಗಳಲ್ಲಿ ಉತ್ತರ ಕರಾವಳಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಚಂಡಮಾರುತ ದುರ್ಬಲಗೊಳ್ಳುವ ನಿರೀಕ್ಷೆಯಿದೆ. ಚೆನ್ನೈ ಮತ್ತು ಕಾರೈಕಲ್‌ನಲ್ಲಿರುವ ಡಾಪ್ಲರ್ ಹವಾಮಾನ ರಾಡಾರ್‌ನಿಂದ ಈ ವ್ಯವಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭಾನುವಾರ ಬೆಳಗ್ಗೆ ತಿಳಿಸಿದೆ.