ನವದೆಹಲಿ:ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಮತ್ತು ಬಿಜೆಪಿ ಕನಿಷ್ಠ 370 ಸ್ಥಾನ ಗೆಲ್ಲಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶ್ವಾಸ ವ್ಯಕ್ತಪಡಿಸಿದರು. ವಿರೋಧ ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನೇ ಕಳೆದುಕೊಂಡಿವೆ ಮತ್ತು ದೀರ್ಘಕಾಲದವರೆಗೆ ವಿರೋಧ ಪಕ್ಷದ ಸ್ಥಾನದಲ್ಲಿಯೇ ಉಳಿಯಲಿವೆ ಎಂಬುದು ತಮಗೆ ಮನವರಿಕೆಯಾಗಿದೆ ಎಂದು ಮೋದಿ ಹೇಳಿದರು.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿ ಪ್ರಧಾನಿ ಮಾತನಾಡಿದರು. "ನಾನು ರಾಷ್ಟ್ರದ ಮನಸ್ಥಿತಿಯನ್ನು ಅಳೆಯಬಲ್ಲೆ. ಎನ್ಡಿಎ ಖಂಡಿತವಾಗಿಯೂ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಮತ್ತು ಬಿಜೆಪಿಗೆ ಕನಿಷ್ಠ 370 ಸ್ಥಾನ ಸಿಗಲಿವೆ" ಎಂದು ಪ್ರಧಾನಿ ಹೇಳಿದರು. ಸರ್ಕಾರದ ಮೂರನೇ ಅವಧಿ ಆರಂಭವಾಗುವುದು ಬಹಳ ದೂರವಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಮಾತನಾಡಿದ ಪ್ರಧಾನಿ, ಒಂದೇ ಉತ್ಪನ್ನವನ್ನು ಮತ್ತೆ ಮತ್ತೆ ಲಾಂಚ್ ಮಾಡುವ ಪ್ರಯತ್ನದಿಂದಾಗಿ ಕಾಂಗ್ರೆಸ್ ಶೀಘ್ರದಲ್ಲೇ ತನ್ನ ಅಂಗಡಿಯನ್ನು ಮುಚ್ಚಬೇಕಾಗಬಹುದು ಎಂದು ಹೇಳಿದರು. "ಇದು ಚುನಾವಣಾ ಸಮಯ ಮತ್ತು ನೀವು ಸ್ವಲ್ಪ ಕಷ್ಟಪಟ್ಟು ಕೆಲಸ ಮಾಡಬೇಕಾಗಿತ್ತು. ಹೊಸದನ್ನು ತರಬೇಕಾಗಿತ್ತು ಮತ್ತು ಜನರಿಗೆ ಸಂದೇಶ ನೀಡಬೇಕಿತ್ತು. ಆದರೆ ನೀವು ದಯನೀಯವಾಗಿ ವಿಫಲರಾಗಿರುವಿರಿ ಎಂದು ಮೋದಿ ತೀಕ್ಷ್ಣವಾಗಿ ಹೇಳಿದರು.