ನವದೆಹಲಿ:ಕೇರಳದ ವಯನಾಡಿನಲ್ಲಿ ಸಂಭವಿಸಿದ ರಣಭೀಕರ ಭೂಕುಸಿತದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೂ 164 ಜನರು ಬಲಿಯಾಗಿದ್ದರೆ, 200 ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 300ಕ್ಕೂ ಅಧಿಕ ಮನೆಗಳು ನಾಶವಾಗಿವೆ. ಮಾನ್ಸೂನ್ ವೇಳೆ ಕೇರಳದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸುವುದು ಸಾಮಾನ್ಯವಾಗಿದ್ದರೂ, ಅದರಿಂದಾಗುವ ಹಾನಿಯನ್ನು ತಡೆಗಟ್ಟುವ ಬಗ್ಗೆ ಸರ್ಕಾರಗಳು ಎಚ್ಚೆತ್ತುಕೊಳ್ಳಬೇಕಿದೆ.
ಕೇರಳದ ವಯನಾಡಿನಲ್ಲಿ ಭಾರೀ ಮಳೆ ಮತ್ತು ಭೂಕುಸಿತಗಳು ಸಂಭವಿಸುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಆದರೆ, ಕೇರಳ ಸರ್ಕಾರ ಈ ಬಗ್ಗೆ ಹೆಚ್ಚಿನ ಕ್ರಮ ವಹಿಸದೇ ಇರುವುದು ಈ ಅನಾಹುತಕ್ಕೆ ಕಾರಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದರು.
ಏಳು ದಿನ ಮುಂಚಿತ ಎಚ್ಚರಿಕೆ:ರಾಜ್ಯಸಭೆಯಲ್ಲಿ ಈ ಬಗ್ಗೆ ಬುಧವಾರ ಮಾಹಿತಿ ಲಿಖಿತ ನೀಡಿದ ಕೇಂದ್ರ ಸಚಿವರು, ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ರಾಜ್ಯ ಸರ್ಕಾರಕ್ಕೆ ಏಳು ದಿನಗಳ ಮುಂಚಿತವಾಗಿ ಪ್ರಕೃತಿ ವಿಕೋಪದ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಪ್ರತಿಪಕ್ಷಗಳು ಈ ಬಗ್ಗೆ ಚಕಾರ ಎತ್ತುತ್ತಿವೆ. ನಡೆದ ದುರಂತಕ್ಕೆ ಕೇಂದ್ರ ಸರ್ಕಾರ ಕಾರಣ ಎಂದು ಬೊಟ್ಟು ತೋರಿಸುತ್ತಿವೆ. ಮಾಹಿತಿ ಇಲ್ಲದೆಯೇ ಟೀಕೆ ಮಾಡುತ್ತಿವೆ ಎಂದು ಅವರು ತಿರುಗೇಟು ನೀಡಿದರು.
ಭಾರತ ಸರ್ಕಾರವು ಜುಲೈ 23 ರಂದು ಅಂದರೆ, ದುರಂತ ಸಂಭವಿಸುವ 7 ದಿನಗಳ ಮುಂಚಿತವಾಗಿ ಕೇರಳ ಸರ್ಕಾರಕ್ಕೆ ತೀವ್ರ ಮಳೆ ಮತ್ತು ಭೂಕುಸಿತದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಬಳಿಕ ಜುಲೈ 24 ಮತ್ತು 25ರಂದು ಪುನರ್ ಎಚ್ಚರಿಕೆ ನೀಡಲಾಗಿದೆ. ಜುಲೈ 26ರಂದು 20 ಸೆಂ.ಮೀ.ಗೂ ಹೆಚ್ಚು ಮಳೆಯಾಗುವ ಮುನ್ಸೂಚನೆಯಿದ್ದು, ಭೂಕುಸಿತವಾಗುವ ಸಂಭವ ಇರುತ್ತದೆ. ಸೂಕ್ಷ್ಮ ಸ್ಥಳಗಳಲ್ಲಿ ಶೀಘ್ರವೇ ಕಾರ್ಯಾಚರಣೆ ನಡೆಸಿ ಎಂದು ತಿಳಿಸಲಾಗಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.
ಹವಾಮಾನ ವೆಬ್ಸೈಟ್ನಲ್ಲಿ ಮಾಹಿತಿ ಇದೆ ಓದಿ:ದುರಂತದ ಬಗ್ಗೆ ರಾಜಕೀಯ ಮಾಡುವುದು ಸರಿಯಲ್ಲ. ಈಗ ನಾವು ಪ್ರಾಣ ಕಳೆದುಕೊಂಡ ಮತ್ತು ಗಾಯಗೊಂಡ ಜನರ ಜೊತೆ ನಿಲ್ಲಬೇಕಿದೆ. ಹವಾಮಾನದ ಕುರಿತು ಮುನ್ನೆಚ್ಚರಿಕೆ ವಹಿಸುವ ವ್ಯವಸ್ಥೆಯು ಭಾರತದಲ್ಲಿ ಉತ್ಕೃಷ್ಟವಾಗಿದೆ. ಇದನ್ನು ಕೆಲ ರಾಜ್ಯಗಳು ನಿರ್ಲಕ್ಷಿಸಿವೆ. ಒಡಿಶಾ, ಗುಜರಾತ್ಗೆ ನೀಡಿದ್ದ ಮುನ್ನೆಚ್ಚರಿಕೆಯನ್ನು ಅಲ್ಲಿನ ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸಿದ ಕಾರಣ ಸಾವು ನೋವುಗಳನ್ನು ತಡೆಯಲಾಗಿತ್ತು ಎಂದು ಉದಾಹರಣೆ ನೀಡಿದರು.
ಕೇರಳದಲ್ಲಿ ನಡೆದ ಪ್ರಕೃತಿ ವಿಕೋಪದ ಬಗ್ಗೆ ಖೇದವಿದೆ. ಸಾವನ್ನಪ್ಪಿದ ಕುಟುಂಬಸ್ಥರು ಮತ್ತು ಕೇರಳ ಜನರ ಬೆಂಬಲಕ್ಕೆ ಕೇಂದ್ರ ಸರ್ಕಾರ ನಿಲ್ಲಲಿದೆ. ರಾಜಕೀಯ ಬಿಟ್ಟು ಮೊದಲು ನಾವು ಜನರ ರಕ್ಷಣೆ ಮಾಡೋಣ. ಕೇರಳ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ:ಪ್ರವಾಸಿಗರ ಸ್ವರ್ಗ ವಯನಾಡೀಗ ನರಕ ಸದೃಶ: 164 ಬಲಿ, 300 ಮನೆಗಳು ಸರ್ವನಾಶ; ಮಣ್ಣಿನಡಿ ಬದುಕುಳಿದವರಿಗೆ ಶೋಧ - Wayanad Landslides