ಮೆಮರಿ(ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ ನಾಯಕಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ 'ನುಸುಳುಕೋರರ' ಮತ ಬ್ಯಾಂಕ್ ಮನಸ್ಸಿಗೆ ನೋವುಂಟಾಗುತ್ತಿದೆ ಎಂಬ ಭಯದಿಂದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಪುರ್ಬಾ ಬರ್ಧಮಾನ್ ಜಿಲ್ಲೆಯ ಮೆಮರಿಯಲ್ಲಿ ಇಂದು ಬಿಜೆಪಿ ಹಮ್ಮಿಕೊಂಡಿದ್ದ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ''ಈ ಲೋಕಸಭೆ ಚುನಾವಣೆ ಜನರಿಗೆ 'ಪರಿವಾರ ರಾಜ್' ಬೇಕೋ ಅಥವಾ 'ರಾಮರಾಜ್ಯ' ಬೇಕೋ ಎಂಬುದನ್ನು ನಿರ್ಧರಿಸುತ್ತದೆ'' ಎಂದು ಹೇಳಿದರು.
"ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ನಾಯಕರು ರಾಮಮಂದಿರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ. ಏಕೆಂದರೆ, ಅವರು ತಮ್ಮ ಪಕ್ಷದ ಮತಬ್ಯಾಂಕ್ ಆಗಿರುವ ನುಸುಳುಕೋರರ ಮನ ನೋಯಿಸಿದಂತಾಗುತ್ತದೆ ಎಂದು ಭಯಗೊಂಡಿದ್ದರು'' ಎಂದು ಶಾ ಟೀಕಿಸಿದರು. ಇದೇ ವೇಳೆ, ''ಟಿಎಂಸಿ ಸಂದೇಶಖಾಲಿ ಅಪರಾಧಿಗಳನ್ನು ರಕ್ಷಿಸಲು ಬಯಸುತ್ತಿದೆ. ಆದರೆ, ಬಿಜೆಪಿ ಈ ಅಪರಾಧಿಗಳನ್ನು ಶಿಕ್ಷಿಸುತ್ತದೆ'' ಎಂದರು.
''ಈ ಚುನಾವಣೆಯು ನಿಮಗೆ ಮಮತಾ ಬ್ಯಾನರ್ಜಿ ಸೋದರಳಿಯ (ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ) ಬಂಗಾಳದ ಮುಖ್ಯಮಂತ್ರಿಯಾಗಬೇಕೋ ಅಥವಾ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಬೇಕೋ ಎಂಬುದನ್ನು ನಿರ್ಧರಿಸುವುದೂ ಆಗಿದೆ. ಮಮತಾ ಬ್ಯಾನರ್ಜಿ ಮತ್ತು ಅವರ ಸೋದರಳಿಯರು ಬಿಜೆಪಿ ಕಾರ್ಯಕರ್ತರಿಗೆ ಎಷ್ಟು ಬೇಕಾದರೂ ಹಿಂಸೆ ನೀಡಬಹುದು. ಆದರೆ, ಟಿಎಂಸಿ ಸೋಲು ಮಾತ್ರ ಸನ್ನಿಹಿತ'' ಎಂದು ಕುಟುಕಿದರು.
ಮುಂದುವರೆದು, ''ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಇಬ್ಬರೂ ಬಿಜೆಪಿಗೆ ಹೆದರಿದ್ದಾರೆ. ಈ ಅಭದ್ರತೆಯಿಂದಾಗಿ ಅವರು ನಮ್ಮ ನಾಯಕರಿಗೆ ಹೋಟೆಲ್‌ಗಳನ್ನು ಕಾಯ್ದಿರಿಸಲು ಮತ್ತು ಕಾರುಗಳನ್ನು ಪಡೆಯಲು ಅನುಮತಿಸುವುದಿಲ್ಲ. ಹೋಟೆಲ್‌ಗಳನ್ನು ಬುಕ್ ಮಾಡಿದರೂ, ಟಿಎಂಸಿ ಗೂಂಡಾಗಳು ಅವುಗಳನ್ನು ಖಾಲಿ ಮಾಡಿಸುತ್ತಿದ್ದಾರೆ. ಇದರಿಂದ ಬಿಜೆಪಿ ಕಾರ್ಯಕರ್ತರು ವಿಚಲಿತರಾಗಿಲ್ಲ ಎಂದು ನಾನು ಅವರಿಗೆ ಹೇಳಬಯಸುತ್ತೇನೆ. ಎಷ್ಟೇ ಪ್ರಯತ್ನಿಸಿದರೂ ನಿಮಗೆ ಅಧಿಕಾರದಿಂದ ವಿದಾಯ ಖಚಿತ'' ಎಂದು ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಷ್ಟೇ ಅಲ್ಲ, ''ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಬ್ಯಾನರ್ಜಿ ಜನರ ದಾರಿ ತಪ್ಪಿಸಿದ್ದಾರೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಒಳನುಸುಳುವವರನ್ನು ಸ್ವಾಗತಿಸಿದ್ದಾರೆ. ನಿರಾಶ್ರಿತರ ಸಿಗುವ ಪೌರತ್ವವನ್ನು ಏಕೆ ವಿರೋಧಿಸುತ್ತಾರೆ?. ಬಂಗಾಳದ ಒಳನುಸುಳುವಿಕೆಯನ್ನು ಬೆಂಬಲಿಸುತ್ತಾರೆ. ಆದರೆ, ಹಿಂದೂ ನಿರಾಶ್ರಿತರಿಗೆ ಪೌರತ್ವವನ್ನು ಪಡೆಯುವುದನ್ನು ವಿರೋಧಿಸುತ್ತಿದ್ದಾರೆ'' ಎಂದು ಅಮಿತ್ ಶಾ ದೂರಿದರು.
ಇದನ್ನೂ ಓದಿ:'ಮೊಹಬ್ಬತ್ ಕಿ ದುಕಾನ್'ನಲ್ಲಿ ನಕಲಿ ವಿಡಿಯೋಗಳ ಮಾರಾಟ: ಕಾಂಗ್ರೆಸ್ ವಿರುದ್ಧ ಮೋದಿ ಪರೋಕ್ಷ ವಾಗ್ದಾಳಿ