ಮುಂಬೈ (ಮಹಾರಾಷ್ಟ್ರ):ಮುಂಬೈನಿಂದ ಮಾರಿಷಸ್‌ಗೆ ತೆರಳಬೇಕಿದ್ದ MK 749 ಸಂಖ್ಯೆಯ ಏರ್ ಮಾರಿಷಸ್ ವಿಮಾನದ ಹವಾ ನಿಯಂತ್ರಣಗಳು (AC) ಕಾರ್ಯನಿರ್ವಹಿಸದ ಕಾರಣ ಪ್ರಯಾಣಿಕರು ತೊಂದರೆ ಅನುಭವಿಸಿದ ಘಟನೆ ವರದಿಯಾಗಿದೆ. ಈ ತಾಂತ್ರಿಕ ಸಮಸ್ಯೆಯಿಂದ ಸುಮಾರು ಐದು ಗಂಟೆಗಳ ಕಾಲ ತೊಂದರೆ ಅನುಭವಿಸಿದ್ದೇವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. 78 ವರ್ಷದ ಓರ್ವ ವೃದ್ಧ ಸೇರಿದಂತೆ ಮಕ್ಕಳು, ಮಹಿಳೆಯರು ಉಸಿರಾಡಲು ಗಾಳಿ ಇಲ್ಲದೇ ಸಂಕಷ್ಟಕ್ಕೊಳಗಾದರು ಎಂದು ಕೆಲವರು ಹೇಳಿಕೊಂಡಿದ್ದಾರೆ.
''ವಿಮಾನವು ಬೆಳಗ್ಗೆ 4:30ಕ್ಕೆ ಮುಂಬೈನಿಂದ ಸರಿಯಾದ ಸಮಯಕ್ಕೆ ಮಾರಿಷಸ್‌ಗೆ ಹೊರಡಬೇಕಾಗಿತ್ತು. ಬೆಳಗ್ಗೆ 3:45ರ ಸುಮಾರಿಗೆ ಪ್ರಯಾಣಿಕರೆಲ್ಲರೂ ವಿಮಾನ ಏರಿ ಕುಳಿತಿದ್ದರು. ಡೋರ್ ಸೇರಿದಂತೆ ಎಲ್ಲವೂ ಲಾಕ್ ಮಾಡಲಾಗಿತ್ತು. ಇನ್ನೇನು ಟೇಕ್ ಆಫ್ ಆಗಬೇಕಿತ್ತು. ಅಷ್ಟರಲ್ಲೇ ಇದ್ದಕ್ಕಿದ್ದಂತೆ ವಿಮಾನದ ಎಂಜಿನ್ ಹಾಗೂ ಹವಾನಿಯಂತ್ರಣಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಪರಿಣಾಮ ತ್ರಿಶಂಕು ಸ್ಥಿತಿಯಲ್ಲಿದ್ದ ಪ್ರಯಾಣಿಕರೆಲ್ಲರೂ ಉಸಿರಾಡಲು ಗಾಳಿ ಇಲ್ಲದೇ ಇತ್ತ ವಿಮಾನದಿಂದ ಇಳಿಯಲೂ ಆಗದೇ ಐದು ಗಂಟೆಗಳ ಕಾಲ ಸಮಸ್ಯೆ ಎದುರಿಸುವಂತಾಯಿತು'' ಎಂದು ಪ್ರಯಾಣಿಕರೊಬ್ಬರು ತಾವು ಎದುರಿಸಿದ ಸಮಸ್ಯೆ ಹೇಳಿಕೊಂಡಿದ್ದಾರೆ.