ನವದೆಹಲಿ: ದೆಹಲಿಯ 8ನೇ ಮುಖ್ಯಮಂತ್ರಿಯಾಗಿ ಎಎಪಿ ನಾಯಕಿ ಆತಿಶಿ ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಪಕ್ಕದಲ್ಲಿ ಖಾಲಿ ಕುರ್ಚಿ ಇಟ್ಟುಕೊಳ್ಳುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರೊಂದಿಗಿನ ಭಾವನಾತ್ಮಕ ಸಂಬಂಧವನ್ನು ಅವರು ಪ್ರದರ್ಶಿಸಿದರು.
ರಾಮಾಯಣದ ಸಾಂಕೇತಿಕತೆಯನ್ನು ಪ್ರತಿಧ್ವನಿಸುತ್ತಾ, "ನಾನಿಂದು ಭರತ ಹೊತ್ತ ಹೊರೆಯನ್ನೇ ಹೊತ್ತಿದ್ದೇನೆ. ಆತ ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿರಿಸಿ ರಾಜ್ಯಭಾರ ನಡೆಸಿದಂತೆಯೇ, ಮುಂದಿನ ನಾಲ್ಕು ತಿಂಗಳ ಕಾಲ ನಾನು ಅದೇ ಸ್ಫೂರ್ತಿಯಲ್ಲಿ ದೆಹಲಿಯಲ್ಲಿ ಆಡಳಿತ ನಡೆಸುತ್ತೇನೆ" ಎಂದರು.
ತಮ್ಮ ಪಕ್ಕದಲ್ಲಿದ್ದ ಖಾಲಿ ಕುರ್ಚಿಯನ್ನು ತೋರಿಸುತ್ತಾ, "ಅರವಿಂದ್ ಕೇಜ್ರಿವಾಲ್ ಮತ್ತೆ ಅಧಿಕಾರಕ್ಕೆ ಬರುವವರೆಗೂ ಇದು ಖಾಲಿಯಾಗಿಯೇ ಇರುತ್ತದೆ" ಎಂದರು.
"ನಾನು ದೆಹಲಿ ಮುಖ್ಯಮಂತ್ರಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದೇನೆ. ಶ್ರೀರಾಮ 14 ವರ್ಷಗಳ ಕಾಲ ವನವಾಸಕ್ಕೆ ಹೋದಾಗ ಆತನ ಸಹೋದರ ಭರತನಿಗಿದ್ದ ನೋವು ಇಂದು ನನ್ನದಾಗಿದೆ. ಕೇಜ್ರಿವಾಲ್ ಅಧಿಕಾರದಿಂದ ಕೆಳಗಿಳಿಯುವ ಮೂಲಕ ರಾಜಕೀಯದಲ್ಲಿ ನಮಗೆ ಘನತೆಯ ಉದಾಹರಣೆಯಾಗಿದ್ದಾರೆ" ಎಂದು ಶ್ಲಾಘಿಸಿದರು.
"ಅರವಿಂದ್ ಕೇಜ್ರಿವಾಲ್ ಅವರ ಇಮೇಜ್ ಹಾಳುಮಾಡಲೆಂದೇ ಕೇಂದ್ರ ಬಿಜೆಪಿ ಇನ್ನಿಲ್ಲದ ಸುಳ್ಳು ಪ್ರಕರಣಗಳನ್ನು ಹೊರಿಸಿ ಅವರನ್ನು ಬಂಧಿಸಿ ಆರು ತಿಂಗಳ ಕಾಲ ಜೈಲಿನಲ್ಲಿರಿಸಿತು. ಬಹಳ ಯಾತನೆ ಅನುಭವಿಸಬೇಕಾಯಿತು. ಇದೆಲ್ಲವೂ ತೆರೆದಿಟ್ಟ ಪುಸ್ತಕ" ಎಂದು ದೂರಿದರು.