ಧರೆಗುರುಳಿದ ಬಹುಮಹಡಿ ಕಟ್ಟಡ.. ಮುನ್ನೆಚ್ಚರಿಕೆಯಿಂದ ತಪ್ಪಿತು ಭಾರಿ ಅನಾಹುತ
ಸುಳ್ಯ (ದಕ್ಷಿಣ ಕನ್ನಡ): ಕೇರಳ-ಕರ್ನಾಟಕ ಗಡಿ ಪ್ರದೇಶದ ವೋರ್ಕಾಡಿ ಸಮೀಪದ ಸುಂಕದಕಟ್ಟೆ ಎಂಬಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಕಟ್ಟಡದಲ್ಲಿದ್ದ ಅಂಗಡಿ, ಕಚೇರಿಗಳನ್ನು ಕಳೆದ ದಿನ ತೆರವು ಮಾಡಲಾದ ಕಾರಣ ದೊಡ್ಡ ಮಟ್ಟದ ಅನಾಹುತ ನಡೆದಿಲ್ಲ. ವೋರ್ಕಾಡಿಯ ಸುಂಕದಕಟ್ಟೆ ಎಂಬಲ್ಲಿದ್ದ ಈ ಬಹುಮಹಡಿ ಕಟ್ಟಡದಲ್ಲಿ ಎರಡು ದಿನಗಳ ಹಿಂದೆ ಬಿರುಕು ಕಾಣಿಸಿಕೊಂಡಿದ್ದರಿಂದ ಅಲ್ಲಿನ ನಿವಾಸಿಗಳು, ಅಂಗಡಿ, ಕಚೇರಿಗಳನ್ನು ಸ್ಥಳಾಂತರಿಸಲಾಗಿತ್ತು. ವೋರ್ಕಾಡಿ ನಿವಾಸಿ ಸುರೇಂದ್ರ ಪೂಜಾರಿ ಎಂಬುವರಿಗೆ ಸೇರಿದ ಕಟ್ಟಡ ಇದಾಗಿದೆ. ಮೂರು ಅಂತಸ್ತಿನ ಕಟ್ಟಡವನ್ನು 10 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗ್ತಿದೆ. ಕಳೆದ ದಿನ ಕಟ್ಟಡದ ಕೆಳಗಿನ ಪ್ರದೇಶದಲ್ಲಿ ಭೂಕುಸಿತವಾಗಿ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇದರಿಂದ ಕಟ್ಟಡ ಅಪಾಯದಂಚಿನಲ್ಲಿದೆ ಎಂಬ ಎಚ್ಚರಿಕೆ ನೀಡಲಾಗಿತ್ತು. ಇದರಲ್ಲಿ ಎರಡು ಕುಟುಂಬಗಳು ವಾಸವಾಗಿದ್ದವು. ಅಲ್ಲದೇ ಟೈಲರ್ ಅಂಗಡಿ, ಪೀಠೋಪಕರಣಗಳ ಅಂಗಡಿ, ಬಿಜೆಪಿಯ ಕಚೇರಿ ಮುಂತಾದವುಗಳು ಕಾರ್ಯನಿರ್ವಹಿಸುತ್ತಿದ್ದವು.