ಚಿಕ್ಕಮಗಳೂರು: ಮನೆಗೆ ಬಂದು ಆಹಾರ ಸಿಗದೆ ನಿತ್ರಾಣಗೊಂಡಿದ್ದ ನಾಗರಹಾವಿನ ರಕ್ಷಣೆ
ಚಿಕ್ಕಮಗಳೂರು: ಮನೆಗೆ ಬಂದಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಅದಕ್ಕೆ ಹಾಲು ಕುಡಿಸಿ ನಂತರ ಅರಣ್ಯಕ್ಕೆ ಬಿಟ್ಟಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಕರ್ತಿಕೆರೆ ಗ್ರಾಮದ ಲಕ್ಷ್ಮಣ ಎಂಬುವವರ ಮನೆಗೆ ಈ ನಾಗರಹಾವು ಬಂದಿತ್ತು. ಈ ನಾಗರಹಾವನ್ನು ನೋಡಿ ಮನೆಯ ಸದಸ್ಯರು ಬೆಚ್ಚಿ ಬಿದ್ದಿದ್ದು, ಕೂಡಲೇ ಹಾವು ಹಿಡಿಯುತ್ತಿದ್ದ ವಿನಯ್ ಎಂಬುವವರಿಗೆ ವಿಚಾರ ತಿಳಿಸಿದ್ದು, ಅವರು ಸುರಕ್ಷಿತವಾಗಿ ಈ ನಾಗರಹಾವನ್ನು ಹಿಡಿದಿದ್ದಾರೆ. ನಾಗರಹಾವು ಹಲವಾರು ದಿನಗಳಿಂದ ಯಾವುದೇ ಆಹಾರ ಸೇವಿಸದೆ ನಿತ್ರಾಣಗೊಂಡಿತ್ತು. ಇದನ್ನು ಗಮನಿಸಿದ ವಿನಯ್, ನಾಗರಹಾವಿಗೆ ಒಂದು ಲೋಟದಲ್ಲಿ ಹಾಲು ಕುಡಿಸಿದ್ದಾರೆ. ಬಳಿಕ ನಾಗರಹಾವು ಚೇತರಿಸಿಕೊಂಡಿದ್ದು, ಸಹಜ ಸ್ಥಿತಿಗೆ ಬಂದಿದೆ. ಇದೀಗ ಹಾವನ್ನು ಸುರಕ್ಷಿತವಾಗಿ ನಗರದ ಹೊರವಲಯದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.