ದಕ್ಷಿಣ ಭಾರತ ಶೈಲಿಯ ಬಾಳೆಲೆ ಊಟ ಸವಿದು ಖುಷಿಪಟ್ಟ ಅಮೆರಿಕ ರಾಯಭಾರಿ: ವಿಡಿಯೋ ನೋಡಿ - ಯುಎಸ್ ರಾಯಭಾರಿ
ನವದೆಹಲಿ:ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಅವರು ಇಂದು ನವದೆಹಲಿಯ ತಮಿಳುನಾಡು ಭವನಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಶೈಲಿಯ ಭೂರಿ ಭೋಜನ ಸವಿದು ಸಂಭ್ರಮಿಸಿದರು. ಅಮೆರಿಕನ್ನರು ಸಾಮಾನ್ಯವಾಗಿ ಯಾವುದೇ ಆಹಾರ ತಿನ್ನಲು ಚಮಚಗಳ ಬಳಕೆ ಮಾಡುವುದು ವಾಡಿಕೆ. ಆದರೆ, ಎರಿಕ್ ಗಾರ್ಸೆಟ್ಟಿ ತಮ್ಮ ಕೈಯಾರೆ ಪಡ್ಡು, ಚಿತ್ರಾನ್ನ, ಅನ್ನ, ಸಾಂಬಾರು ಹಾಗೂ ಪಾಯಸ ಸೇರಿದಂತೆ ಹಲವು ಖಾದ್ಯಗಳನ್ನು ಚಪ್ಪರಿಸಿ ತಿಂದು ಖುಷಿ ಪಟ್ಟರು. ಅಪರೂಪದ ವಿಡಿಯೋವನ್ನು ಸ್ವತಃ ಯುಎಸ್ ರಾಯಭಾರಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ತಮಿಳುನಾಡು ಭವನಕ್ಕೆ ಆಗಮಿಸಿದ ಎರಿಕ್ ಗಾರ್ಸೆಟ್ಟಿ ಅವರನ್ನು ಅಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡಿದ್ದಾರೆ. ಎಲ್ಲರೊಂದಿಗೆ ಕುಳಿತು ಬಾಳೆ ಎಲೆಯ ಮೇಲೆ ಊಟ ಸೇವಿಸಿದ್ದಾರೆ. ಇದರ ಜೊತೆಗೆ ಅವುಗಳ ವಿಶೇಷತೆಗಳನ್ನು ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ. ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಕರ್ನಾಟಕ ಮತ್ತು ತಮಿಳುನಾಡಿನ ಖಾದ್ಯಗಳು ಬಹುಪಾಲು ಒಂದೇ ರೀತಿಯಾಗಿ ಇರುತ್ತವೆ ಎಂದು ಹೇಳುತ್ತಾರೆ. ಒಟ್ಟು 2.52 ನಿಮಿಷಗಳ ವಿಡಿಯೋವನ್ನು ಎರಿಕ್ ಗಾರ್ಸೆಟ್ಟಿ ಶೇರ್ ಮಾಡಿದ್ದಾರೆ.
ಶೀಘ್ರವೇ ಚೆನ್ನೈಗೆ ಬರುವೆ - ಎರಿಕ್: ವಿಡಿಯೋ ಜೊತೆಗೆ ಎರಿಕ್ ಗಾರ್ಸೆಟ್ಟಿ, ದೆಹಲಿಯ ತಮಿಳುನಾಡು ಭವನದಿಂದ ವನಕ್ಕಂ! ಇಂದು, ನಾನು ಬಾಳೆಲೆ ಮೇಲೆ ಸಾಂಪ್ರದಾಯಿಕ ದಕ್ಷಿಣ ಭಾರತದ ಥಾಲಿಯನ್ನು ಪ್ರಯತ್ನಿಸಿದೆ. ರುಚಿಕರ ದಕ್ಷಿಣ ಭಾರತೀಯ ಖಾದ್ಯಗಳಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಚೆನ್ನೈ ನನ್ನ ಹೃದಯದಲ್ಲಿದೆ. ಶೀಘ್ರದಲ್ಲೇ ಆಗಮಿಸಲು ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಯುಎಸ್ ರಕ್ಷಣಾ ಕಾರ್ಯದರ್ಶಿ ಆಸ್ಟಿನ್ ಭಾರತಕ್ಕೆ ಆಗಮನ: ಮಿಲಿಟರಿ ಸಹಕಾರ ಬಲಪಡಿಸಲು ಚರ್ಚೆ