ತೆಯ್ಯಂ ಪ್ರದರ್ಶನದಲ್ಲಿ ಪುಟ್ಟ ಡೋಲು ಬಾರಿಸಿ ಗಮನಸೆಳೆದ ಬಾಲಕ- ವಿಡಿಯೋ ನೋಡಿ - ಕೇರಳ
ಕ್ಯಾಲಿಕಟ್ (ಕೇರಳ): ಅಣ್ಣಾಸ್ಸೆರಿ ಮನಾಥನಾಥ ನಾಗಕಾಳಿ ದೇವಸ್ಥಾನದಲ್ಲಿ ಮಾ.14 ರಂದು ಜಾತ್ರಾ ಮಹೋತ್ಸವ ನೆರವೇರಿದೆ. ತೆಯ್ಯಂ ನೃತ್ಯ ಪ್ರದರ್ಶನ ದೇವಾಲಯದ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. (ತೆಯ್ಯಂ- ಇದು ಉತ್ತರ ಕೇರಳದ ಧಾರ್ಮಿಕ ನೃತ್ಯ ಪ್ರಕಾರ. ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಇದೆ). ಉತ್ಸವದಲ್ಲಿ ಎರಡೂವರೆ ವರ್ಷದ ಬಾಲಕ ಪುಟ್ಟ ಡೋಲು ಬಾರಿಸುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾನೆ.
ತೆಯ್ಯಂ ಪ್ರದರ್ಶನ ಎರಡೂವರೆ ವರ್ಷದ ಮಿಹಾನ್ ಡೋಲು ಕಲಾವಿದರನ್ನು ಅನುಕರಿಸುತ್ತಾ ಸ್ವತಃ ಚಿಕ್ಕ ಡೋಲು ಬಾರಿಸುತ್ತಿದ್ದ. ಆಗ ತೆಯ್ಯಂ ಕಲಾವಿದರೊಬ್ಬರು ಮಿಹಾನ್‌ನನ್ನು ಪ್ರದರ್ಶನ ಪ್ರದೇಶದ ಮಧ್ಯಭಾಗಕ್ಕೆ ಕರೆದೊಯ್ದುರು. ಮಗುವಿನ ಲಯ, ಗತಿಗೆ ಅನುಗುಣವಾಗಿ ಅವರ ಸುತ್ತಲೂ ಕಲಾವಿದರು ತೆಯ್ಯಂ ಪ್ರದರ್ಶಿಸಿದರು.
ಮಿಹಾನ್ ಕ್ಯಾಲಿಕಟ್‌ನ ಪುತ್ಯಂಗಡಿ ಮೂಲದ ಪ್ರಬಿಲ್ ಮತ್ತು ಅನುಷಾ ದಂಪತಿಯ ಪುತ್ರ. ಪ್ರಬಿಲ್ ಉದ್ಯಮಿಯಾಗಿದ್ದು, ಪತ್ನಿ ಅನುಷಾ ಕಲೆಕ್ಟರೇಟ್‌ನಲ್ಲಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ದಂಪತಿ ಕೆಲಸಕ್ಕೆ ಹೋದಾಗ ಮಗುವನ್ನು ಅವರ ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದಾರೆ. ಒಮ್ಮೆ ಮಿಹಾನ್ ತನ್ನ ಚಿಕ್ಕಪ್ಪನೊಂದಿಗೆ ದೇವಾಲಯದ ಉತ್ಸವಕ್ಕೆ ಭೇಟಿ ನೀಡಿದಾಗ ಅವನಿಗೆ ಒಂದು ಸಣ್ಣ ಡೋಲನ್ನು ಖರೀದಿಸಿ ಬಂದಿದ್ದರು. ಆದರೆ ಅವನು ಅದನ್ನು ಮುರಿದು ಹಾಕಿದ್ದನಂತೆ. ಬಳಿಕ 2ನೇ ಬಾರಿ ಡೋಲು ಖರೀದಿಸಿದಾಗ ಅದನ್ನು ನೆಚ್ಚಿಕೊಂಡಿದ್ದಾನೆ. ಯಾವುದೇ ಹಬ್ಬ ಬಂದರೆ ಸಾಕು ಮಿಹಾನ್ ಉತ್ಸಹದಿಂದ ಡೋಲು ಬಾರಿಸುತ್ತಾನೆ.
ಮಿಹಾನ್ ಕಾಂತಾರ ಚಿತ್ರದ ದೊಡ್ಡ ಅಭಿಮಾನಿಯಂತೆ. ಕಾಂತಾರದಲ್ಲಿನ ತೆಯ್ಯಂ ಮಿಹಾನ್ನ ದೇವರು. ಅದರಲ್ಲಿನ ತೆಯ್ಯಂ ಪಾತ್ರದಂತೆಯೇ ಸದ್ದು ಮಾಡುವ ಪ್ರಯತ್ನವನ್ನೂ ಮಾಡುತ್ತಾನೆ. ಭವಿಷ್ಯದಲ್ಲಿ ಮಿಹಾನ್‌ಗೆ ಡೋಲು ಮತ್ತು ಇತರ ಸಂಗೀತ ವಾದ್ಯಗಳಲ್ಲಿ ಹೆಚ್ಚಿನ ಪರಿಣತಿ ನೀಡಲು ಕುಟುಂಬ ಬಯಸುತ್ತಿದೆ.