ಚಲಿಸುವ ಕಾರಿನ ಬಾನೆಟ್ ಹಿಡಿದು ಮಹಿಳೆ ಮಲಗಿರುವ ವಿಡಿಯೋ ವೈರಲ್: ಮೂವರು ಪೊಲೀಸರು ಸಸ್ಪೆಂಡ್ - ಈಟಿವಿ ಭಾರತ್ ಕನ್ನಡ ನ್ಯೂಸ್
ನರಸಿಂಗ್‌ಪುರ (ಮಧ್ಯಪ್ರದೇಶ) : ಜಿಲ್ಲೆಯ ಶಂಕಿತ ಮಾದಕ ದ್ರವ್ಯ ದಂಧೆಕೋರರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆ ತರುವ ಸಂದರ್ಭದಲ್ಲಿ ಚಲಿಸುತ್ತಿದ್ದ ಕಾರಿನ ಬಾನೆಟ್ ಹಿಡಿದು ಅದರ ಮೇಲೆಯೇ ಮಹಿಳೆಯೊಬ್ಬರು ಮಲಗಿಕೊಂಡಿದ್ದರು. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದ್ದು, ಈ ಸಂಬಂಧ ಮಧ್ಯಪ್ರದೇಶ ಸರ್ಕಾರ ಕರ್ತವ್ಯ ಲೋಪದಡಿ ಮೂವರು ಪೊಲೀಸರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಬುಧವಾರ ಭೋಪಾಲ್‌ನಲ್ಲಿ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ನಾವು ವೈರಲ್ ವಿಡಿಯೋವನ್ನು ಗಮನಿಸಿದ್ದೇವೆ. ಇದೇ ಆಧಾರದ ಮೇಲೆ ಮೂವರು ಪೊಲೀಸರನ್ನು ಕರ್ತವ್ಯ ಲೋಪದಡಿ ಅಮಾನತುಗೊಳಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದ್ದರು.
ಇನ್ನು ಈ ಘಟನೆಯ ಕುರಿತು ಮಾತನಾಡಿರುವ ನರಸಿಂಗ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್, ಗುಪ್ತ ಮಾಹಿತಿ ಮೇರೆಗೆ ಮಾದಕ ದ್ರವ್ಯ ದಂಧೆಕೋರರನ್ನು ಹಿಡಿಯಲು ಪೊಲೀಸ್ ತಂಡ ಸೋಮವಾರ ಗೊಟೆಗಾಂವ್ ಪಟ್ಟಣಕ್ಕೆ ತೆರಳಿತ್ತು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ಕಾರಿನಲ್ಲಿ ಠಾಣೆಗೆ ಕರೆತರುತ್ತಿದ್ದಾಗ ಮಹಿಳೆಯೊಬ್ಬರು ಕಾರಿನ ಬಾನೆಟ್ ಹಿಡಿದುಕೊಂಡಿದ್ದರು. ಕಾರು ನಿಧಾನವಾಗಿ ಚಲಿಸುತ್ತ ಪೊಲೀಸ್ ಠಾಣೆಯ ಗೇಟ್ ಪ್ರವೇಶಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಚಲಿಸುತ್ತಿದ್ದ ಕಾರಿನಲ್ಲಿ ದಿಢೀರ್ ಬೆಂಕಿ.. ನಡುರಸ್ತೆಯಲ್ಲೇ ಹೊತ್ತಿ ಉರಿದ ಕಾರು: ವಿಡಿಯೋ