ಪಿಂಚಣಿ ಪ್ರತಿಭಟನೆ ವೇಳೆ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕನ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವನ - ETV Bharat kannada News
ಬಾಗಲಕೋಟೆ :ನಿವೃತ್ತ ಶಿಕ್ಷಕರ ಪಿಂಚಣಿಗಾಗಿ ನಡೆಯುತ್ತಿದ್ದ ಪ್ರತಿಭಟನೆ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಶಿಕ್ಷಕನ ಕುಟುಂಬವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಭೇಟಿ ಮಾಡಿ, ಸಾಂತ್ವನ ಹೇಳಿದ್ದಾರೆ. ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದ ನಿವಾಸಿ ಆಗಿದ್ದ ಸಿದ್ದಯ್ಯ ಹಿರೇಮಠ ಎಂಬುವವರು ಇತ್ತೀಚೆಗೆ ಎನ್ಪಿಸಿ ವಿರೋಧಿಸಿ, ಒಪಿಎಸ್ ಜಾರಿಗೆ ಆಗ್ರಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆ ಕ್ಷೇತ್ರದ ಶಾಸಕರೂ ಆಗಿರುವ ಸಿದ್ದರಾಮಯ್ಯನವರು ಪಟ್ಟದಕಲ್ಲು ಗ್ರಾಮದಲ್ಲಿರುವ ಮೃತ ಶಿಕ್ಷಕನ ಕುಟುಂಬಕ್ಕೆ ಧೈರ್ಯ ಹೇಳಿದರು.
ಇದೇ ಸಮಯದಲ್ಲಿ ವೈಯಕ್ತಿಕವಾಗಿ ಮೃತರ ಕುಟುಂಬದವರಿಗೆ 2 ಲಕ್ಷ ರೂಪಾಯಿಗಳ ಪರಿಹಾರಧನ ನೀಡಿದರು. ಬಳಿಕ ಮಾತನಾಡಿದ ಅವರು, ಮುಂದೆ ನಮ್ಮ ಸರ್ಕಾರ ಬಂದಾಗ, ಪಿಂಚಣಿ ಸೇರಿದಂತೆ ಇತರ ಯೋಜನೆಗಳನ್ನು ನೀಡುವುದಾಗಿ ಭರವಸೆ ನೀಡಿದರು. ಇದಕ್ಕೂ ಮುಂಚೆ ಬಿಜೆಪಿ ವಿರುದ್ದ ಟ್ವೀಟ್ ಮಾಡುವ ಮೂಲಕ ಕಿಡಿಕಾಡಿದ್ದರು. ಇನ್ನಷ್ಟು ಜೀವಗಳು ಬಲಿಯಾಗುವ ಮುನ್ನ ಮುಷ್ಕರದಲ್ಲಿ ತೊಡಗಿರುವ ಅನುದಾನಿತ ಶಾಲಾ ಶಿಕ್ಷಕರನ್ನು ಕರೆದು ಸರ್ಕಾರ ಮಾತುಕತೆ ನಡೆಸಿ, ಅವರ ಬೇಡಿಕೆಗಳನ್ನು ತಕ್ಷಣ ಈಡೇರಿಸುವ ಕೆಲಸ ಮಾಡಬೇಕು. ಮತ್ತು ಈಗಾಗಲೇ ಪ್ರಾಣ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದರು.
ಇದನ್ನೂ ಓದಿ :18 ಸಾವಿರ ಫಲಾನುಭವಿಗಳ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ, ನಾಳೆ ಬಾ ಎನ್ನುವ ಸ್ಕೀಮ್ ಯಾವುದೂ ಇಲ್ಲ: ಸಚಿವ ಆರ್ ಅಶೋಕ್