ಅಸ್ವಸ್ಥಗೊಂಡ ಕಾಡಾನೆ ಹಳ್ಳದಲ್ಲಿ ನಿತ್ರಾಣ ಸ್ಥಿತಿಯಲ್ಲಿ ಪತ್ತೆ - ETV Bharat kannada News
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) :ಅಸ್ವಸ್ಥಗೊಂಡ ಕಾಡಾನೆಯೊಂದು ಸುಬ್ರಹ್ಮಣ್ಯ ಪರಿಸರದಲ್ಲಿ ಸಂಚಾರ ಮಾಡುತ್ತಿರುವ ಬಗ್ಗೆ ಈ ಹಿಂದೆ ಈಟಿವಿ ಭಾರತ ವರದಿ ಮಾಡಿತ್ತು. ಇದೀಗ ಈ ಕಾಡಾನೆ ಇಂದು ಸಂಪೂರ್ಣವಾಗಿ ನಿತ್ರಾಣವಾದ ಸ್ಥಿತಿಯಲ್ಲಿ ಹಳ್ಳವೊಂದರಲ್ಲಿ ಪತ್ತೆಯಾಗಿದೆ. ಕೆಲವು ದಿನಗಳ ಹಿಂದೆ ಸುಬ್ರಹ್ಮಣ್ಯ ಸಮೀಪದ ಚೇರು ಭಾಗದಲ್ಲಿ ಈ ಕಾಡಾನೆ ಅಸ್ವಸ್ಥ ರೀತಿಯಲ್ಲಿ ಸಂಚಾರ ಮಾಡಿದ್ದು, ನಂತರದಲ್ಲಿ ಸುಬ್ರಹ್ಮಣ್ಯ ಸಮೀಪದ ಎರ್ಮಾಯಿಲ್ ಎಂಬಲ್ಲಿ ಮತ್ತೆ ರಸ್ತೆಯಲ್ಲೆ ಸಾರ್ವಜನಿಕರಿಗೆ ನಡೆದಾಡಲು ಕಷ್ಟಪಡುವ ಈ ಕಾಡಾನೆ ಕಾಣಸಿಕ್ಕಿದೆ.
ಕಾಡಾನೆಯ ಎಡಗಾಲಿಗೆ ಏನೋ ಬಲವಾದ ಗಾಯಾವಾದಂತೇ ಕಾಣುತ್ತಿದ್ದು, ಆನೆಯು ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಮತ್ತು ತಿಂದ ಆಹಾರವನ್ನು ಜಗಿದು ಅಲ್ಲಲ್ಲೆ ಉಗಿದು ಹೋಗುತ್ತಿದೆ ಎಂಬುದಾಗಿಯೂ ಸಾರ್ವಜನಿಕರು ಮಾಹಿತಿ ನೀಡಿದ್ದರು. ಈ ಕಾಡಾನೆ ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಇಲ್ಲಿನ ಕೊಂಬಾರು ಗ್ರಾಮದ ಕೆಂಜಾಳ ಸಮೀಪದ ಹಳ್ಳಕ್ಕೆ ಬಿದ್ದಿದೆ.
ಈ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯ ಅಧಿಕಾರಿ ರಾಘವೇಂದ್ರ ಈಟಿವಿ ಭಾರತದೊಂದಿಗೆ ಮಾತನಾಡಿದ್ದು, ನಮಗೆ ಈ ಬಗ್ಗೆ ಮಾಹಿತಿ ಲಭ್ಯವಾದ ತಕ್ಷಣವೇ ನುರಿತ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿದ್ದು, ವೈದ್ಯರು ಆಗಮಿಸಿ ಪರಿಶೀಲನೆ ನಡೆಸುವ ಸಮಯದಲ್ಲಿ ಆನೆ ಮತ್ತೆ ಕಾಡಿನ ಒಳಗಡೆಗೆ ಹೋಗಿದೆ. ವೈದ್ಯಕೀಯ ತಜ್ಞರು ಹೇಳುವ ಪ್ರಕಾರ, ಈ ಕಾಡಾನೆ ವಯೋಸಹಜ ತೊಂದರೆಗಳಿಂದ ಬಳಲುತ್ತಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಆನೆಯ ಹಲ್ಲುಗಳು ಉದುರಿರುವ ಶಂಕೆ ಇದ್ದು, ಈ ಕಾರಣದಿಂದಾಗಿ ಆನೆ ಆಹಾರ ಸೇವಿಸುವಾಗ ಜೀರ್ಣವಾಗದೇ ವಾಂತಿ ಮಾಡುತ್ತಿದೆ. ಇಂದು ಈ ಆನೆಗೆ ನೀರು ಕೂಡಾ ಕುಡಿಯಲು ಸಹ ಸಾಧ್ಯವಾಗುತ್ತಿಲ್ಲ. ದಟ್ಟ ಕಾಡಿಗೆ ಹೋಗಿರುವುದರಿಂದ ಆನೆಯ ಚಲನವಲನಗಳನ್ನು ಪತ್ತೆಹಚ್ಚುವ ಕಾರ್ಯಕ್ಕೂ ತೊಂದರೆ ಆಗುತ್ತಿದೆ. ಆದರೂ ನಮ್ಮ ಸಿಬ್ಬಂದಿ ನಿರಂತರವಾಗಿ ಆನೆಯ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಪತ್ತೆಯಾದ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ :ಜಂಗಲ್ ಸಫಾರಿ ವೇಳೆ ಪ್ರವಾಸಿಗರ ಮೇಲೆ ದಾಳಿಗೆ ಯತ್ನಿಸಿದ ಹುಲಿ; ಚಾಲಕನ ವಿರುದ್ದ ಪ್ರಕರಣ ದಾಖಲು