ಚಿಕ್ಕಜಾತ್ರಾ ಮಹೋತ್ಸವ: ವಿಜೃಂಭಣೆಯಿಂದ ಜರುಗಿದ ಶ್ರೀ ನಂಜುಂಡೇಶ್ವರ ಸ್ವಾಮಿ ತೆಪ್ಪೋತ್ಸವ
Published : Dec 2, 2023, 7:33 AM IST
ಮೈಸೂರು:ದಕ್ಷಿಣ ಕಾಶಿ ಪ್ರಸಿದ್ಧಿಯ ನಂಜನಗೂಡಿನ ಶ್ರೀ ನಂಜುಂಡೇಶ್ವರಸ್ವಾಮಿ ದೇವಾಲಯದಲ್ಲಿ ಚಿಕ್ಕಜಾತ್ರಾ ಮಹೋತ್ಸವ ಅಂಗವಾಗಿ ಕಪಿಲಾ ಸ್ನಾನಘಟ್ಟದಲ್ಲಿ ಶ್ರೀ ನಂಜುಂಡೇಶ್ವರ ಸ್ವಾಮಿಯ ತೆಪ್ಪೋತ್ಸವ ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಸಂಜೆ 7ರ ಸಮಯದಲ್ಲಿ ದೇವಸ್ಥಾನದಿಂದ ಪಾರ್ವತಿ ಸಮೇತ ಶ್ರೀ ನಂಜುಂಡೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಹೊತ್ತು ತರಲಾಯಿತು. ಬಳಿಕ ಕಪಿಲಾ ನದಿ ತೀರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಬಳಿ ಇಟ್ಟು ದೇವಾಲಯದ ಪ್ರಧಾನ ಆಗಮಿಕ ನಾಗಚಂದ್ರ ದೀಕ್ಷಿತ್ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಪೂಜೆಯ ನಂತರ ವಿವಿಧ ಬಗೆಯ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಯಾಂತ್ರಿಕ ದೋಣಿಯಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂರ್ವಪಶ್ಚಿಮವಾಗಿ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಲಾಯಿತು.
ಈ ವೇಳೆ ನದಿಯ ದಡದಲ್ಲಿ ನೆರೆದಿದ್ದ ಜನರು ಶ್ರೀ ನಂಜುಂಡೇಶ್ವರನಿಗೆ ಜಯಘೋಷಗಳನ್ನು ಕೂಗಿ ಸಂಭ್ರಮಿಸಿದರು. ನಂತರ ಕಪಿಲಾ ನದಿಯ ದಡದಿಂದ ಉತ್ಸವ ಮೂರ್ತಿಯನ್ನು ವಾಪಸ್ ಮೆರವಣಿಗೆ ಮೂಲಕ ಹೊತ್ತುತಂದು ದೇವಾಲಯದ ರಥ ಬೀದಿಯಲ್ಲಿ ಮೆರವಣಿಗೆ ಮಾಡಿ, ದೇವಾಲಯಕ್ಕೆ ಕೊಂಡೊಯ್ಯಲಾಯಿತು. ತೆಪ್ಪೋತ್ಸವ ಸಂದರ್ಭದಲ್ಲಿ ನದಿ ತೀರದಲ್ಲಿ ಡಿವೈಎಸ್ಪಿ ಗೋವಿಂದರಾಜು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಇದನ್ನೂ ನೋಡಿ:5 ದಿನ, 2 ಕೋಟಿಗೂ ಹೆಚ್ಚು ಹಣ: ಮಾದಪ್ಪನ ಬೆಟ್ಟದ ಜಾತ್ರೆ - ಭಕ್ತರಿಂದ ಆದಾಯ "ಅಕ್ಷಯ ಪಾತ್ರೆ"!!