ಮೈಸೂರು: ಬಾಲಕಿ ಮೈಮೇಲೆ ಹಾದು ಹೋದ ಶಾಲಾ ಬಸ್- ಸಿಸಿಟಿವಿಯಲ್ಲಿ ಘಟನೆ ಸೆರೆ
Published : Nov 10, 2023, 9:46 AM IST
|Updated : Nov 10, 2023, 12:59 PM IST
ಮೈಸೂರು:ಚಾಲಕನ ಅರಿವಿಗೆ ಬಾರದೇ ಬಾಲಕಿ ಮೇಲೆ ಶಾಲಾ ಬಸ್ ಹಾದು ಹೋದ ಘಟನೆ ಜಿಲ್ಲೆಯ ಹುಣಸೂರು ಪಟ್ಟಣದ ಮಂಜುನಾಥ ನಗರದಲ್ಲಿ ನಡೆದಿದೆ. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.
ಹುಣಸೂರು ಪಟ್ಟಣದ ಮಂಜುನಾಥ ನಗರದ ನಿವಾಸಿಯಾಗಿರುವ ಬಾಲಕಿ ಬಸ್ ಇಳಿದು, ವಾಹನದ ಮುಂಭಾಗದಿಂದ ರಸ್ತೆ ದಾಟಿ ಮನೆಗೆ ಹೋಗುತ್ತಿದ್ದಳು. ಇದೇ ಸಂದರ್ಭದಲ್ಲಿ ಬಸ್ ಮುಂದೆ ಚಲಿಸಿದೆ. ಬಾಲಕಿಯನ್ನು ಗಮನಿಸದ ಚಾಲಕ ಬಸ್ ಚಲಾಯಿಸಿದ್ದಾನೆ. ಬಸ್ ಬಾಲಕಿಯ ಮೈಮೇಲೆ ಹಾದು ಹೋಗಿದೆ.
ಇದಾದ ನಂತರ ಘಟನೆ ತಿಳಿದ ಚಾಲಕ ತಕ್ಷಣ ಬಸ್ ನಿಲ್ಲಿಸಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಆಕೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೋಷಕರು ಚಾಲಕನ ವಿರುದ್ಧ ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಶಾಲಾ ಮಕ್ಕಳ ಬಗ್ಗೆ ಬಸ್ ಚಾಲಕರು ಹೆಚ್ಚು ಕಾಳಜಿ ವಹಿಸಬೇಕು. ರಸ್ತೆ ದಾಟುವ ಮಕ್ಕಳನ್ನು ಜಾಗರೂಕತೆಯಿಂದ ಗಮನಿಸಿ ವಾಹನ ಚಲಾಯಿಸಬೇಕು ಎಂದು ಸಾರ್ವಜನಿಕರು ಹೇಳಿದ್ದಾರೆ.