20 ವರ್ಷ ದೇಶಸೇವೆ ಮಾಡಿ ನಿವೃತ್ತನಾದ ಯೋಧನಿಗೆ ಹುಟ್ಟೂರಿನಲ್ಲಿ ಆತ್ಮೀಯ ಸ್ವಾಗತ- ವಿಡಿಯೋ
ದೊಡ್ಡಬಳ್ಳಾಪುರ: ಕೇಂದ್ರ ಮೀಸಲು ಪೊಲೀಸ್ ಪಡೆಯಲ್ಲಿ (ಸಿಆರ್ಪಿಎಫ್) 20 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ಹುಟ್ಟೂರಿಗೆ ಬಂದ ಯೋಧನಿಗೆ ಗ್ರಾಮಸ್ಥರು, ಕುಟುಂಬದವರು, ಗೆಳೆಯರು ಪಟಾಕಿ ಸಿಡಿಸಿ, ಹೂವಿನ ಮಳೆಗರೆದು ಸ್ವಾಗತಿಸಿದರು. ಯೋಧ ಅನಂತ ರಾಜ ಗೋಪಾಲ್ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದ ವೆಂಕಟೇಶಪ್ಪ ಮತ್ತು ಶಾಂತಮ್ಮ ದಂಪತಿಯ ಪುತ್ರ. ಬಳೆ ವ್ಯಾಪಾರ ಮಾಡುವ ಬಡ ಕುಟುಂಬ ಇವರದ್ದು. ಅನಂತ ರಾಜ ಗೋಪಾಲ್ ಅವರು ಸಿಆರ್ಪಿಎಫ್ನಲ್ಲಿ ಕೋಬ್ರಾ ಕಮಾಂಡೋ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸ್ವಗ್ರಾಮಕ್ಕೆ ಆಗಮಿಸಿದ ಯೋಧನನ್ನು ಪಶು ಆಸ್ಪತ್ರೆಯಿಂದ ಗ್ರಾಮದ ಪ್ರಮುಖ ರಸ್ತೆಯಲ್ಲಿ ತೆರೆದ ಜೀಪ್ನಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ದೇಶದ ವಿವಿಧ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಗುಜರಾತ್, ಪಂಜಾಬ್, ಮೇಘಾಲಯ, ಮಣಿಪುರ, ತ್ರಿಪುರದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. "ನಮ್ಮ ಊರಿನ ಜನರು ನನಗೆ ಅದ್ಧೂರಿಯಾಗಿ ಸ್ವಾಗತ ನೀಡಿದ್ದಾರೆ. ತುಂಬಾ ಖುಷಿಯಾಗಿದೆ. ಯುವಕರು ಸೇನೆ ಸೇರಲು ಮುಂದಾಗಬೇಕು. ಸೇವಾವಧಿಯ ಪ್ರತಿ ಕ್ಷಣವೂ ಇಡೀ ಬದುಕಿನಲ್ಲಿ ಸುಂದರ, ಸಾಹಸಮಯ ನೆನಪುಗಳನ್ನು ತಂದುಕೊಡುತ್ತವೆ" ಎಂದರು.