ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷರು ಏರ್ಪಡಿಸಿದ್ದ ಔತಣಕೂಟದಲ್ಲಿ ಜೈ ಹೋ ಹಾಡು- ವಿಡಿಯೋ - ಮೋದಿ ವೈರಲ್ ವಿಡಿಯೋ
ಪ್ಯಾರಿಸ್ :ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್ ಪ್ರವಾಸದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಪಿಎಂ ಮೋದಿ ಅವರಿಗಾಗಿ ಆಯೋಜಿಸಿದ್ದ ವಿಶೇಷ ಔತಣಕೂಟದ ಕುರಿತಾದ ವಿಡಿಯೋ ಇದಾಗಿದ್ದು, ಫ್ರೆಂಚ್ ಗಾಯಕರು 'ಜೈ ಹೋ' ಸಾಂಗ್ ಹಾಡುತ್ತಿರುವುದನ್ನು ಕಾಣಬಹುದು. ಅಷ್ಟೇ ಅಲ್ಲದೆ, ಫ್ರಾನ್ಸ್ ಅಧ್ಯಕ್ಷರು ಭಾರತೀಯ ಹಾಡಿನ ಟ್ಯೂನ್‌ಗೆ ಕುಳಿತಲ್ಲೇ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
ಫ್ರೆಂಚ್ ರಾಷ್ಟ್ರೀಯ ದಿನವಾದ ಜುಲೈ 14ರಂದು ಪ್ಯಾರಿಸ್‌ನ ಐಕಾನಿಕ್ ಲೌವ್ರೆ ಮ್ಯೂಸಿಯಂನಲ್ಲಿ ಔತಣಕೂಟ ಆಯೋಜಿಸಲಾಗಿತ್ತು. ಈ ವೇಳೆ ಖ್ಯಾತ ಸಂಗೀತ ಸಂಯೋಜಕ ಎ. ಆರ್. ರೆಹಮಾನ್ ಅವರಿಂದ ಟ್ಯೂನ್ ಮಾಡಲಾದ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಆಸ್ಕರ್ ಪ್ರಶಸ್ತಿ ವಿಜೇತ ಹಾಡು 'ಜೈ ಹೋ' ಅನ್ನು ಮೋದಿಗಾಗಿ ಎರಡು ಬಾರಿ ಹಾಡಲಾಯಿತು.
ಫ್ರಾನ್ಸ್‌ಗೆ ಎರಡು ದಿನಗಳ ಅಧಿಕೃತ ಪ್ರವಾಸದ ಅಂಗವಾಗಿ ತೆರಳಿದ್ದ ಪ್ರಧಾನಿ ಮೋದಿ, ಬಳಿಕ ಯುಎಇಗೂ ಭೇಟಿ ನೀಡಿ ಇದೀಗ ದೇಶಕ್ಕೆ ಮರಳಿದ್ದಾರೆ. ಮೋದಿ ಭಾರತಕ್ಕೆ ಮರಳಿದ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ :ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾರತೀಯ ತುಕಡಿ ನೋಡಿ ಅದ್ಭುತವೆನಿಸಿತು: ಪ್ರಧಾನಿ ಮೋದಿ