ಕಾಂಗ್ರೆಸ್ ಪಕ್ಷದಲ್ಲೇ ಇದ್ದು, ಸರ್ಕಾರದ ಸದಸ್ಯೆ ಸಹ ಆಗಿರುವೆ: ಶಾಸಕಿ ಲತಾ ಮಲ್ಲಿಕಾರ್ಜುನ್ - ಕಾಂಗ್ರೆಸ್ ಅಭ್ಯರ್ಥಿ ಕೊಟ್ರೇಶ್
Published : Nov 11, 2023, 4:39 PM IST
ದಾವಣಗೆರೆ:2023 ಚುನಾವಣೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ಗಾಗಿ ಸೆಣಸಾಟ ನಡೆಸಿ ಹಿಂದೆ ಸರಿಯದೇ ಪಕ್ಷೇತರ ಅಭ್ಯರ್ಥಿಯಾಗಿ ನಿಂತಿದ್ದರಿಂದ ದಿ ಎಂಪಿ ಪ್ರಕಾಶ್ ಅವರ ಪುತ್ರಿ ಲತಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡಿದ್ದರು.
ಪಕ್ಷೇತರ ಅಭ್ಯರ್ಥಿಯಾಗಿದ್ದರೂ ಲತಾ ಅವರು 2023 ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೊಟ್ರೇಶ್ ಹಾಗೂ ಅಂದಿನ ಶಾಸಕ ಗಾಲಿ ಕರುಣಾಕರ ರೆಡ್ಡಿ ವಿರುದ್ಧ ಗೆದ್ದು ಬೀಗಿದ್ದರು. ಇದೀಗ ಗೆದ್ದು ಶಾಸಕಿ ಆಗಿರುವ ಲತಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ ಎನ್ನುವುದನ್ನು ಇಂದು ದಾವಣಗೆರೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಿಟ್ಟಾಗ ಅಥವಾ ಉಚ್ಚಾಟನೆಗೊಂಡ ನಂತರ ಆರು ತಿಂಗಳು ಪಕ್ಷಕ್ಕೆ ಸೇರಲು ಬರುವುದಿಲ್ಲ. ಆರು ತಿಂಗಳ ಬಳಿಕ ನಾನೂ ಅರ್ಜಿ ಪತ್ರ ಸಲ್ಲಿಸಿ ಪಕ್ಷಕ್ಕೆ ಸೇರಬಹುದಾಗಿದೆ. ಇನ್ನು ಸರ್ಕಾರದಲ್ಲಿ ಸಹ ಸದಸ್ಯೆ ಆಗಿರುತ್ತೇನೆ ಎನ್ನುವುದರ ಮೇಲೆ ಪಕ್ಷಕ್ಕೆ ಸೇರಬಹುದು. ಪಕ್ಷದಲ್ಲಿ ಸಹ ಸದಸ್ಯೆಯಾಗಿರುತ್ತೇನೆ ಎಂದ ಮೇಲೆ ಉಲ್ಟಾ ಹೊಡೆಯಲು ಬರುವುದಿಲ್ಲ ಎಂದು ಹೇಳಿದರು.
ನಾನು ಪಕ್ಷದ ಸದಸ್ಯತ್ವ ವಾಪಸ್ ಪಡೆದಿಲ್ಲ, ಹೇಗೆ ಉಲ್ಟಾ ಹೊಡೆಯಲು ಸಾಧ್ಯ?, ವಾಪಾಸ್ ಪಡೆದರೆ ಉಲ್ಟಾ ಹೊಡೆಯಬಹುದು. ಪಕ್ಷದಲ್ಲಿ ಉಚ್ಚಾಟನೆ ಆಗಿದ್ದರಿಂದ ಪಕ್ಷದಲಿಲ್ಲ. ಅದು ತಿಂಗಳ ಬಳಿಕ ಅದು ಸರಿ ಹೋಗಲಿದೆ. ನಾನು ಪಕ್ಷದಲ್ಲೇ ಇದ್ದೇನೆ. ಪಕ್ಷ ಹೇಗೆ ಆದೇಶ ನೀಡುತ್ತದೆಯೋ ಹಾಗೆ ಆಗಲಿದೆ ಎಂದು ತಿಳಿಸಿದರು.
ಇನ್ನು ಲೋಕಸಭಾ ಚುನಾವಣೆ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯೆಸಿದ ಅವರು, ಹೈಕಮಾಂಡ್ ಯಾರಿಗೆ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಿ ಆಯ್ಕೆ ಮಾಡುತ್ತದೆಯೋ, ನಾವು ನಮ್ಮ ಕ್ಷೇತ್ರದಲ್ಲಿ ಅವರ ಪರ ಕೆಲಸ ಮಾಡುತ್ತೇವೆ. ಕಳೆದ ಬಾರಿ ಯಾವ ರೀತಿ ಕೆಲಸವನ್ನು ಮಾಡಿದ್ದವೋ ಅದೇ ರೀತಿ ನಮ್ಮ ಅಭ್ಯರ್ಥಿ ಪರ ಕೆಲಸ ಮಾಡಿ ಗೆಲ್ಲಿಸುವ ಪ್ರಯತ್ನ ಮಾಡುತ್ತೇವೆ ಎಂದು ಸ್ಪಷ್ಟ ಪಡಿಸಿದರು.
ಇದನ್ನೂಓದಿ:ವಿಜಯೇಂದ್ರ ಆಯ್ಕೆ: ಕಾಂಗ್ರೆಸ್ ಟೀಕೆಗೆ ಛಲವಾದಿ ನಾರಾಯಣಸ್ವಾಮಿ ತಿರುಗೇಟು