ವರುಣದಲ್ಲಿ ಸಿದ್ದರಾಮಯ್ಯ vs ಸೋಮಣ್ಣ: ಗದ್ದುಗೆ ಗುದ್ದಾಟದಲ್ಲಿ ಗೆಲುವು ಯಾರಿಗೆ?
ರಾಜ್ಯ ವಿಧಾನಸಭೆ ಚುನಾವಣೆಗೆ ದಿನ ಸಮೀಪಿಸುತ್ತಿದೆ. ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವರುಣ ಕ್ಷೇತ್ರ ರಾಜ್ಯ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆದಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ನಿನ್ನೆಯಷ್ಟೇ ನಾಮಪತ್ರ ಸಲ್ಲಿಸಿದ್ದಾರೆ. ಬೃಹತ್ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದ ಅವರು ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಬಿಜೆಪಿಯಿಂದ ವಸತಿ ಸಚಿವ ವಿ.ಸೋಮಣ್ಣ ಅಖಾಡಕ್ಕಿಳಿದಿರುವುದು ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಿಸಿದೆ. ಇವರಿಬ್ಬರಿಗೆ ಟಕ್ಕರ್ ಕೊಡಲು ಜೆಡಿಎಸ್ ಅಭ್ಯರ್ಥಿ ಡಾ. ಭಾರತಿ ಶಂಕರ್ ಸಜ್ಜಾಗಿದ್ದಾರೆ.
ಕಳೆದ ಬಾರಿ ಬಾದಾಮಿಯಿಂದ ಗೆದ್ದಿದ್ದ ಸಿದ್ದರಾಮಯ್ಯ ಈ ಸಲ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಒಲವು ತೋರಿಸಿದ್ದರು. ವರುಣ ಜೊತೆಗೆ ಕೋಲಾರ ಕ್ಷೇತ್ರದಲ್ಲೂ ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ ಅಂತಿಮವಾಗಿ ಹೈಕಮಾಂಡ್ ಸೂಚನೆಯಂತೆ ವರುಣ ಕ್ಷೇತ್ರದಿಂದ ಮಾತ್ರ ಸಿದ್ದರಾಮಯ್ಯ ಸ್ಫರ್ಧೆ ಮಾಡುತ್ತಿದ್ದಾರೆ. ಹಾಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ತಮ್ಮ ತಂದೆಗಾಗಿ ಕ್ಷೇತ್ರ ತ್ಯಾಗ ಮಾಡಿದ್ದಾರೆ.
ಜಾತಿವಾರು ಲೆಕ್ಕಾಚಾರದಿಂದ ನೋಡುವುದಾದರೆ, ವರುಣ ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಸ್ಸಿ ಮತ್ತು ಕುರುಬ ಸಮುದಾಯದವರು ನಿರ್ಣಾಯಕರು. ಮತದಾರ ಪ್ರಭುಗಳು ಈ ಬಾರಿ ಯಾರ ಕೈ ಹಿಡಿಯಲಿದ್ದಾರೆ ಎಂಬುದು ಕುತೂಹಲ.
ಇದನ್ನೂ ಓದಿ:ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ: ಅಚ್ಚರಿಗೆ ಕಾರಣವಾದ ಕಾಂಗ್ರೆಸ್ ನಡೆ