ತಮಿಳುನಾಡಿಗೆ ಹೆಚ್ಚುವರಿ ನೀರು ಬೇಡ, ತನ್ನ ಪಾಲಿನ ನೀರಷ್ಟೇ ಬೇಕು: ಕೆ.ಅಣ್ಣಾಮಲೈ - State BJP chief Annamalai
Published : Sep 14, 2023, 10:24 AM IST
ದಿಂಡಿಗಲ್ (ತಮಿಳುನಾಡು):ಕರ್ನಾಟಕದೊಂದಿಗೆ ನಡೆಯುತ್ತಿರುವ ಕಾವೇರಿ ಜಲ ವಿವಾದದ ನಡುವೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಬುಧವಾರ ಈ ಕುರಿತು ಪ್ರತಿಕ್ರಿಯಿಸಿದರು. ''ತಮಿಳುನಾಡಿಗೆ ಹೆಚ್ಚುವರಿ ನೀರು ಬೇಡ. ಆದರೆ, ಲಭಿಸಬೇಕಿರುವ ಕಾವೇರಿ ನೀರಿನ ಪಾಲು ಮಾತ್ರ ಬೇಕು'' ಎಂದರು.
"ಕರ್ನಾಟಕ ಕಾನೂನು ಪಾಲಿಸಬೇಕು. 2018ರ ನಂತರ ಕಾವೇರಿ ನೀರು ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು. ಅದು ನಿರ್ಧಾರ ಪ್ರಕಟಿಸಿದೆ. ಸಮಸ್ಯೆಗಳಿದ್ದರೆ ಅವರು ಸುಪ್ರೀಂ ಕೋರ್ಟ್‌ಗೆ ಹೋಗಿ ಮೇಲ್ಮನವಿ ಸಲ್ಲಿಸಬಹುದು. ಆದ್ರೆ, ತಮಿಳುನಾಡಿನ ವಾದವನ್ನು ಕೋರ್ಟ್ ಸಂಪೂರ್ಣವಾಗಿ ಪರಿಶೀಲಿಸುತ್ತದೆ ಎಂದು ನನಗೆ ಖಾತ್ರಿಯಿದೆ. ತಮಿಳುನಾಡಿಗೆ ಹೆಚ್ಚುವರಿ ನೀರು ಬೇಡ, ತನ್ನ ಪಾಲಿನ ನೀರಷ್ಟೇ ಬೇಕು" ಎಂದು ಅವರು ತಿಳಿಸಿದರು.
ಬುಧವಾರದಿಂದ 15 ದಿನಗಳ ಕಾಲ ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಕಾವೇರಿ ನೀರು ನಿರ್ವಹಣಾ ಸಮಿತಿ ಮಂಗಳವಾರ ನಿರ್ದೇಶನ ನೀಡಿದೆ. ಕರ್ನಾಟಕದಲ್ಲಿ ನೀರಿನ ಅಭಾವ ತಲೆದೋರಿದ್ದು, ರೈತರು ಕಂಗಾಲಾಗಿದ್ದಾರೆ. ಆದರೆ, ತಮಿಳುನಾಡಿನ ಡಿಎಂಕೆ ಸರಕಾರ ಮುಂದಿಟ್ಟಿದ್ದ 12,500 ಕ್ಯೂಸೆಕ್ ಬೇಡಿಕೆಗೆ ವಿರುದ್ಧವಾಗಿ ಕಾವೇರಿಯಿಂದ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸಮಿತಿ ಸೂಚಿಸಿದೆ.
ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಜಲ ನಿಯಂತ್ರಣಾ ಸಮಿತಿಯು ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿರುವುದು "ನ್ಯಾಯಸಮ್ಮತವಲ್ಲದ ನಿರ್ಧಾರ" ಎಂದು ಟೀಕಿಸಿದ್ದಾರೆ. ಇನ್ನೊಂದೆಡೆ, ತಮಿಳುನಾಡಿಗೆ ನೀರು ನಿರಾಕರಿಸುವ ಯಾವುದೇ ಅಧಿಕಾರ ನೆರೆ ರಾಜ್ಯಕ್ಕೆ ಇಲ್ಲ ಎಂದು ಡಿಎಂಕೆ ವಕ್ತಾರ ಟಿ.ಕೆ.ಎಸ್.ಇಳಂಗೋವನ್ ಬುಧವಾರ ಹೇಳಿದ್ದರು.
ಇದನ್ನೂ ಓದಿ:ನಿರುದ್ಯೋಗ ಸಮಸ್ಯೆ ವಿರೋಧಿಸಿ ತೆಲಂಗಾಣ ಸರ್ಕಾರದ ವಿರುದ್ದ ಕೇಂದ್ರ ಸಚಿವರ ಉಪವಾಸ ಸತ್ಯಾಗ್ರಹ